ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ನಾಯಕಿ ಮಣಿಯಾಗಿ ಅಭಿನಯಿಸಿ ಕರ್ನಾಟಕದ ಮನೆಮಗಳಾಗಿ ಮಿಂಚಿರುವ ಭೂಮಿ ಶೆಟ್ಟಿ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ! ಹೌದು, ಕಿನ್ನರಿ ಧಾರಾವಾಹಿಯ ನಂತರ ಹಿರಿತೆರೆಯತ್ತ ಮುಖ ಮಾಡಿದ ಭೂಮಿ ಶೆಟ್ಟಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಅವಕಾಶವನ್ನು ಪಡೆಯುತ್ತಿದ್ದಾರೆ.

ಇಕ್ಕಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಕುಂದಾಪುರದ ಕುವರಿ ಮುಂದೆ ಅಭಿನಯಿಸಿದ್ದು ವಾಸಂತಿ ಎನ್ನುವ ಕಲಾತ್ಮಕ ಸಿನಿಮಾದಲ್ಲಿ. ಅದರಲ್ಲಿ ಗೇರು ಬೀಜ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ನಟಿಸಿರುವ ಈಕೆ ವನಜ ಎನ್ನುವ ವೆಬ್ ಸಿರೀಸ್ ನಲ್ಲಿಯೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಕಿ ಸೋಮ್ಲು ನಿರ್ದೇಶನದ ಕೆಂಡದ ಸೆರಗು ಸಿನಿಮಾದಲ್ಲಿ ಕುಸ್ತಿ ಪಟು ಪಾತ್ರಕ್ಕೆ ಜೀವ ತುಂಬಲಿದ್ದಾರೆ ಭೂಮಿ ಶೆಟ್ಟಿ. “ನನ್ನ ಬೆಳ್ಳಿತೆರೆಯ ಪಯಣದಲ್ಲಿ ಈ ಪಾತ್ರ ತುಂಬಾ ಮಹತ್ವವಾದುದು. ಯಾಕೆಂದರೆ ನಾನು ಇಲ್ಲಿಯ ತನಕ ಇಂತಹ ಪಾತ್ರಕ್ಕೆ ಜೀವ ತುಂಬಿರಲಿಲ್ಲ. ನನ್ನ ಪ್ರಕಾರ ಇದು ಒಂದು ವಿಭಿನ್ನ ಮಾತ್ರವಲ್ಲದೇ ಜವಾಬ್ದಾರಿಯುತ ಪಾತ್ರ. ಇನ್ನು ಈ ಸಿನಿಮಾ ನನ್ನ ವೃತ್ತಿಬದುಕಿಗೆ ಹೊಸ ಮೈಲಿಗಲ್ಲು ಆಗಲಿದೆ” ಎಂದು ಹೇಳುತ್ತಾರೆ ಭೂಮಿ ಶೆಟ್ಟಿ

ಪಾತ್ರದ ಬಗ್ಗೆ ಮಾತನಾಡಿರುವ ಭೂಮಿ ಶೆಟ್ಟಿ “ನಿಜವಾದ ಗರಡಿ ಮನೆಯಲ್ಲಿ ನಾವು ಶೂಟ್ ಮಾಡಿದ್ದೇವೆ. ದಾವಣಗೆರೆಯ ಕುಸ್ತಿಪಟುಗಳು ಕೂಡಾ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕುಸ್ತಿ ಎಂದರೇನು, ಹೇಗಿರುತ್ತದೆ ಎಂಬುದನ್ನೆಲ್ಲಾ ನಾನು ಈಗ ತಿಳಿದುಕೊಂಡಿದ್ದೇನೆ. ಒಟ್ಟಿನಲ್ಲಿ ತೆರೆ ಮೇಲೆ ನೋಡಿದಾಗ ಅಬ್ಬ ಎಂದು ಅನ್ನಿಸುದಂತೂ ನಿಜ. ನಾನಂತೂ ತುಂಬಾನೇ ಕಾತರಗೊಂಡಿದ್ದೇನೆ” ಎನ್ನುತ್ತಾರೆ

ಇನ್ನು ಕೆಂಡದ ಸೆರಗು ಒಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರ ಚೊಚ್ಚಲ ಕೃತಿ ಅಡಿಯಲ್ಲಿ 2020ರ ಸಾಲಿನಲ್ಲಿ ಪ್ರಶಸ್ತಿ ಪಡೆದಿದೆ. ಇನ್ನು ಕಾದಂಬರಿಯ ಲೇಖಕ ರಾಕಿ ಸೋಮ್ಲಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ವಿಶೇಷ

ಸಿನಿಮಾರಂಗದಲ್ಲಿ ಹಲವು ವರ್ಷ ಸಾಕಷ್ಟು ನಿರ್ದೇಶಕರ ಜೊತೆ ಸಹ-ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಅನುಭವ ರಾಕಿ ಸೋಮ್ಲಿ ಅವರದು. ಇನ್ನು 15ಕ್ಕೂ ಹೆಚ್ಚು ಹಾಡಿಗೆ ಸಾಹಿತ್ಯ ಒದಗಿಸಿದ್ದು, ಕೆಲ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ 13 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ