ಸೌಂದರ್ಯವನ್ನು ತನ್ನೊಡಲಲ್ಲಿ ಸದಾ ಇಟ್ಟುಕೊಂಡಿರುವ ಹೂವುಗಳು ಎಲ್ಲರಿಗೂ ಪ್ರಿಯ. ವಿಭಿನ್ನವಾದ ಹೆಸರುಗಳನ್ನು ಹೊಂದಿರುವಂತೆಯೇ ಉಪಯೋಗದಲ್ಲಿಯೂ ಹಲವಾರು ವಿಶೇಷತೆಗಳನ್ನು ಪುಷ್ಪಗಳು ಹೊಂದಿವೆ. ಸೌಂದರ್ಯವರ್ಧಕಗಳಾಗಿ, ಔಷಧಿಯಾಗಿ ಹೀಗೇ ಹಲವು ರೀತಿಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ.
ಇಂತಹ ಪುಷ್ಪಗುಚ್ಛದಲ್ಲಿ ಗುಲಾಬಿಯೂ ಒಂದು. ಪ್ರೀತಿಯ ಸಂಕೇತವಾಗಿರುವ ಗುಲಾಬಿ ಹೂವು, ಮನುಷ್ಯನ ಚರ್ಮಕ್ಕೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತದೆ. ಅಲ್ಲದೆ, ಗುಲಾಬಿಗಳು ಉತ್ಕರ್ಷಣಾ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಗುಲಾಬಿಯಿಂದ ತಯಾರಿಸುವ ರೋಸ್ ವಾಟರ್ ಅಂತೂ ಎಲ್ಲೆಡೆ ಜನಪ್ರಿಯ.
ಅಂದ ಹಾಗೆ ಗುಲಾಬಿಯನ್ನು ಬಳಸಿ ಮನೆಯಲ್ಲಿಯೇ ಸುಲಭವಾಗಿ ಫೇಸ್ ಪ್ಯಾಕ್‌ಗಳನ್ನು ತಯಾರಿಸಬಹುದು. ದುಬಾರಿ ಉತ್ಪನ್ನಗಳ ಪಯಾರ್ಯವಾಗಿ ಈ ಫೇಸ್ ಪ್ಯಾಕ್‌ಗಳನ್ನು ಒಮ್ಮೆ ಟ್ರೈ ಮಾಡಿ ನೋಡೋಣ ಬನ್ನಿ.

ಜೇನುತುಪ್ಪ ಮತ್ತು ಗುಲಾಬಿ ದಳಗಳು
ಈ ಫೇಸ್ ಪ್ಯಾಕ್‌ಗಳಲ್ಲಿ ಜೇನುತುಪ್ಪವನ್ನು ಬಳಸಲಾಗುತ್ತದೆ. ಜೇನುತುಪ್ಪದೊಂದಿಗೆ ತಯಾರಿಸುವ ಗುಲಾಬಿ ಫೇಸ್ ಪ್ಯಾಕ್ ಮುಖ್ಯವಾಗಿ ವಿಟಮಿನ್ ಮತ್ತು ಖನಿಜಗಳಿಂದ ಕೂಡಿದೆ. ಚರ್ಮಕ್ಕೆ ಜೇನುತುಪ್ಪವನ್ನು ಬಳಸುವುದರಿಂದ ಚರ್ಮವನ್ನು ಪೋಷಿಸುವುದರ ಜೊತೆಗೆ ಶುದ್ಧೀಕರಿಸಿದಂತಾಗುತ್ತದೆ.
ಜೇನುತುಪ್ಪವು ಉತ್ಕರ್ಷಣಾ ನಿರೋಧಕ ಗುಣವನ್ನು ಹೊಂದಿದ್ದು, ಚರ್ಮದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ಚರ್ಮಕ್ಕೆ ವಿಶೇಷವಾದ ಬಣ್ಣವನ್ನು ನೀಡುವ ಗುಣವೂ ಇದರಲ್ಲಡಗಿದೆ.
ಈ ಫೇಸ್ ಪ್ಯಾಕನ್ನು ತಯಾರಿಸುವ ವಿಧಾನ
ಇದನ್ನು ತಯಾರಿಸಲು ಗುಲಾಬಿ ದಳಗಳು, ಶುದ್ಧವಾದ ಜೇನು ಮತ್ತು ಗುಲಾಬಿ ನೀರಿದ್ದರೆ ಸಾಕು. ತಾಜಾ ಗುಲಾಬಿ ಹೂವೊಂದರ ದಳಗಳನ್ನು ಬೇರ್ಪಡಿಸಿ, ಮೃದುವಾಗಿ ನೀರಿನಲ್ಲಿ ತೊಳೆದ ನಂತರ 3 ರಿಂದ 4 ಗಂಟೆಗಳ ಕಾಲ ರೋಸ್ ವಾಟರ್‌ನಲ್ಲಿ ನೆನೆಸಿಡಬೇಕು. ತದನಂತರ ದಳಗಳನ್ನು ಪೇಸ್ಟ್ ಮಾಡಿಕೊಂಡು ಇದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಬೇಕು. ಈ ಮಿಶ್ರಣವನ್ನು ತ್ವಚೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಬಹುದು.15 ರಿಂದ 20 ನಿಮಿಷಗಳ ನಂತರ ಶುದ್ಧವಾದ ನೀರಿನಲ್ಲಿ ತೊಳೆಯಬೇಕು. ಹೀಗೆ ವಾರಕ್ಕೆ 2 ರಿಂದ 3 ಬಾರಿ ಅನ್ವಯಿಸುವುದರಿಂದ ತ್ವಚೆಯು ಆಕರ್ಷಕವಾಗಿ ಹೊಳೆಯುವುದನ್ನು ಗಮನಿಸಬಹುದು.

ಹಾಲು ಮತ್ತು ಗುಲಾಬಿ ದಳಗಳು
ಹಾಲು ಅತ್ಯುತ್ತಮವಾದ ಕ್ಲೆನ್ಸರ್ ಗುಣವನ್ನು ಹೊಂದಿದೆ. ಅಲ್ಲದೆ, ಅತ್ಯುತ್ತಮವಾದ ಎಕ್ಸ್ಫೋಲಿಯೇಟರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಗುಲಾಬಿ ದಳ ಮತ್ತು ಹಾಲಿನ ಸಮ್ಮಿಶ್ರಣವು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವಲ್ಲಿ ಉತ್ತಮವಾದ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಹಾಲಿನಲ್ಲಿರುವ ಉತ್ಕರ್ಷಣಾ ನಿರೋಧಕಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ತಯಾರಿಸುವ ವಿಧಾನ
ಇದನ್ನು ತಯಾರಿಸಲು ಗುಲಾಬಿ ದಳಗಳು,ಹಸಿ ಹಾಲು ಮತ್ತು ಕಡಲೆಹಿಟ್ಟು ಬೇಕಾಗುತ್ತದೆ. ಮೊದಲಿಗೆ ಗುಲಾಬಿ ದಳಗಳನ್ನು ನೀರಿನಲ್ಲಿ ತೊಳೆಯಬೇಕು. ನಂತರ ಅದನ್ನು ಮೃದುವಾಗಿ ಪೇಸ್ಟ್ ಮಾಡಿ ಅದಕ್ಕೆ 1 ಚಮಚ ಕಡಲೆ ಹಿಟ್ಟು, ಬೇಕಾದಷ್ಟು ಹಸಿ ಹಾಲನ್ನು ಬೆರಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ತ್ವಚೆ ಮತ್ತು ಕುತ್ತಿಗೆಗೆ ಹಚ್ಚಿದರಾಯಿತು. 5 ರಿಂದ 20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ಶುದ್ಧವಾದ ನೀರಿನಲ್ಲಿ ತೊಳೆಯಬೇಕು.ಇದನ್ನು ಕೂಡ ವಾರಕ್ಕೆ 2 ರಿಂದ 3 ಬಾರಿ ಪುನರಾವರ್ತಿಸುವುದರಿಂದ ಮೃದುವಾದ ಚರ್ಮವನ್ನು ಪಡೆಯಬಹುದು.

ಗುಲಾಬಿ ಮತ್ತು ಅಲೋವೆರಾ
ಅಲೋವೆರಾ ಅತ್ಯುತ್ತಮ ಸೌಂದರ್ಯ ವರ್ಧಕಗಳಲ್ಲಿ ಒಂದು. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಸಂಕೋಚಕವಾಗಿರುವುದರಿಂದ ಚರ್ಮವನ್ನು ಬಿಗಿಗೊಳಿಸಿ, ಚರ್ಮಕ್ಕೆ ವಿಶೇಷವಾದ ಕಾಂತಿಯನ್ನು ನೀಡುತ್ತದೆ. ಅಲೋವೆರಾ ಮತ್ತು ಗುಲಾಬಿಯ ಸಮ್ಮಿಶ್ರಣವು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ತಯಾರಿಸುವ ವಿಧಾನ
ಇದನ್ನು ತಯಾರಿಸಲು ಗುಲಾಬಿ ದಳಗಳು, ಗುಲಾಬಿ ನೀರು ಹಾಗೂ ಶುದ್ಧ ಅಲೋವೆರಾ ಲೋಳೆಯ ಅಗತ್ಯವಿದೆ. ಮೊದಲಿಗೆ ತಾಜಾ ಗುಲಾಬಿ ದಳಗಳನ್ನು ಚೆನ್ನಾಗಿ ಬಿಸಿಲಲ್ಲಿ ಒಣಗಿಸಬೇಕು. ಒಣಗಿದ ಗುಲಾಬಿ ದಳಗಳನ್ನು ಪುಡಿ ಮಾಡಿ, ಒಂದು ಬಟ್ಟಲಿನಲ್ಲಿ ಶೇಖರಣೆ ಮಾಡಿ ಇಡಬೇಕು. ನಂತರ ಒಂದು ಚಮಚ ಗುಲಾಬಿ ಪುಡಿಗೆ, 2 ಚಮಚ ಅಲೋವೆರಾವನ್ನು ಮಿಶ್ರಣ ಮಾಡಿ ಬೇಕೆಂದೆನಿಸಿದರೆ ಗುಲಾಬಿ ನೀರನ್ನು ಬೆರೆಸಿ ನಂತರ ನಯವಾದ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ತ್ವಚೆ, ಕುತ್ತಿಗೆ ಸೇರಿದಂತೆ ದೇಹದ ಭಾಗಗಳಿಗೆ ಹಚ್ಚಿ ಸುಮಾರು 15 ರಿಂದ 20 ನಿಮಿಷದ ನಂತರ ತೊಳೆದರಾಯಿತು. ಹೀಗೆ ಮಾಡುವುದರಿಂದ ಕ್ರಮೇಣ ಮೊಡವೆಗಳು ಕಡಿಮೆ ಆಗುವುದನ್ನು ಗಮನಿಸಬಹುದು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ