ಕೋವಿಡ್-19 (Covid 19) ಲಾಕ್ಡೌನ್ ಸಮಯದಲ್ಲಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಚೀನಾ ಮೂಲದ ಗೇಮಿಂಗ್ ಕಂಪನಿಯ ಪಬ್ಜಿ ಆಟ ದಿಢೀರ್ ಆಗಿ ಬ್ಯಾನ್ ಆಯಿತು. ಕೇವಲ ಭಾರತದಲ್ಲೇ ತಿಂಗಳಿಗೆ 50 ಮಿಲಿಯನ್ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದ ಈ ಪಬ್ಜಿ ಗೇಮ್ (PUBG) ಮಕ್ಕಳ ಮೇಲೆ ನೇರ ಪರಿಣಾಮ ಬೀರಿದ್ದು ಸುಳ್ಳಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್ಗಳನ್ನು ನಿಷೇಧ ಹೇರಿದ ಕಾರಣ ಪಬ್ಜಿ ಕೂಡ ಭಾರತದಲ್ಲಿ ಕಣ್ಮರೆಯಾಯಿತು. ಇದರಿಂದ ಬೇಸತ್ತಿದ್ದ ಜನರಿಗೆ ಗೇಮ್ ಡೆವಲಪಿಂಗ್ ಕಂಪನಿ ಕ್ರಾಫ್ಟನ್, ಥೇಟ್ ಪಬ್ಜಿ ರೀತಿಯಲ್ಲೇ ಇರುವ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ (Battlegrounds Mobile India) ಎಂಬ ಹೊಸ ಗೇಮ್ ಅನ್ನು ಪರಿಚಯಿಸಿತು. ಜುಲೈ 2, 2021 ರಂದು ಇದು ಭಾರತದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಯಿತು. ಆದರೀಗ BGMI ಕೂಡ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಯುವಕರ ನಿದ್ದೆ ಕೆಡಿಸಿದ್ದ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ನ ಆ್ಯಪ್ ಸ್ಟೋರ್ನಿಂದ ಕಣ್ಮರೆಯಾಗಿದೆ. ಗುರುವಾರ ರಾತ್ರಿ ಈ ಎರಡೂ ಆ್ಯಪ್ ಸ್ಟೋರ್ನಿಂದ ಪ್ರಸಿದ್ಧ ಗೇಮ್ ಅನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೆಕ್ ಗೇಂಟ್ಸ್ ವರದಿ ಮಾಡಿದೆ. ಆದರೆ, ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಕ್ರಾಫ್ಟನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, “ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್ನಿಂದ BGMI ಅನ್ನು ತೆಗೆದು ಹಾಕಿದ ಬಗ್ಗೆ ಸರ್ಕಾರ ಮತ್ತು ನಮ್ಮ ನಡುವೆ ಯಾವುದೇ ಮಾತುಕತೆ ನಡೆದಿಲ್ಲ,” ಎಂದು ಹೇಳಿದೆ. ಅತ್ತ ಗೂಗಲ್, “ನಮಗೆ ಬಂದ ಆದೇಶದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಕೆಲ ಡೆವಲಪರ್‌ಗೆ ಸೂಚನೆಯನ್ನು ಕೂಡ ನೀಡಿದ್ದೇವೆ ಮತ್ತು ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ,” ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಗೂಗಲ್ಗೆ ಮತ್ತು ಆ್ಯಪಲ್ಗೆ ಈ ಗೇಮ್ ಅನ್ನು ತೆಗೆದುಹಾಕುವಂತೆ ಆದೇಶ ಹೊರಡಿಸಿದ್ದಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ಇತ್ತೀಚೆಗಷ್ಟೆ ರಾಜ್ಯಸಭೆಯಲ್ಲಿ ಮಕ್ಕಳ ಮೇಳೆ ಪರಿಣಾಮ ಬೀರುವಂತಹ ಗೇಮ್ಗಳನ್ನು ನಿಷೇಧ ಮಾಡುವ ಕುರಿತು ಚರ್ಚೆ ನಡೆದಿತ್ತು. ಅಲ್ಲದೆ ಬ್ಯಾಟರ್ಗ್ರೌಂಡ್ ಮೊಬೈಲ್ ಆಟವನ್ನು ಆಡಬೇಡ ಎಂದಿದ್ದಕ್ಕೆ ಮಗಳು ತಾಯಿಯನ್ನೇ ಕೊಂದಿದ್ದ ಘಟನೆ ಕೂಡ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.
ಬ್ಯಾನ್ ಆಗಿದೆಯೇ?:
ಬ್ಯಾಟರ್ ಗ್ರೌಂಡ್ ಮೊಬೈಲ್ ಇಂಡಿಯಾ ಗೇಮ್ ಭಾರತದಲ್ಲಿ ನಿಷೇಧವಾಗಿಲ್ಲ. ನಿಷೇಧ ಮಾಡುವ ಕುರಿತ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಇನ್ನೂ ಕೈಗೊಂಡಿಲ್ಲ. ಈಗಾಗಲೇ ಈ ಗೇಮ್ ಅನ್ನು ಇನ್ಸ್ಟಾಲ್ ಮಾಡಿ ಆಡುತ್ತಿರುವವರಿಗೆ ಯಾವುದೇ ತೊಂದರೆ ಕೂಡ ಆಗಿಲ್ಲ. BGMI ರೀತಿಯಲ್ಲಿ ಪಬ್ಜಿ ನ್ಯೂ ಸ್ಟೇಟ್, ಅಲೆಪ್ಸ್ ಲೆಜೆಂಡ್ ಮತ್ತು ಕಾಲ್ ಆಫ್ ಡ್ಯೂಟಿ ಎಂಬ ಗೇಮ್ ಕೂಡ ಇದೆ.