‘ಕರ್ನಾಟಕ ರತ್ನ’ ಪುನೀತ್ ರಾಜಕುಮಾರ್ ಅವರ ಬಹುಕಾಲದ ಕನಸು, ‘ಗಂಧದಗುಡಿ’ಯ ಬಿಡುಗಡೆಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಕನ್ನಡ ನಾಡಿನಾದ್ಯಂತ ಅಪಾರ ಅಭಿಮಾನಿಗಳು ಅಪ್ಪುವನ್ನು ಮತ್ತೊಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಸಿನಿಮಾದ ಬಿಡುಗಡೆಯ ಬಗೆಗಿನ ತಯಾರಿಗಳು, ಹೊಸ ಹೊಸ ಸುದ್ದಿಗಳು ಅಭಿಮಾನಿಗಳಲ್ಲಿ ಸಂತಸ ನೀಡುತ್ತಲೇ ಇದೆ. ಸದ್ಯ ಚಿತ್ರದ ಬಗೆಗಿನ ಇನ್ನೊಂದು ವಿಷಯ ಹೊರಬಿದ್ದಿದೆ.

‘ಗಂಧದಗುಡಿ’ ಒಂದು ಡಾಕ್ಯುಮೆಂಟರಿ ಚಿತ್ರ. ಡಾಕ್ಯು-ಮೂವಿ ಎಂದು ಕೂಡ ಕರೆಯಲಾಗುತ್ತಿದೆ. ಈ ಚಿತ್ರದ ಚಿತ್ರೀಕರಣವನ್ನು ಕರುನಾಡಿನ ವನ್ಯಜೀವಿ ಸಂಪತ್ತಿನ ಸುತ್ತ ಮಾಡಲಾಗಿದೆ. ಸದ್ಯ ಸಿನಿಮಾದ ಹಿನ್ನೆಲೆ ಧ್ವನಿಗಾಗಿ ಸ್ವತಃ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ತಮ್ಮ ಕಂಠ ನೀಡಿದ್ದಾರೆ. ಸದ್ಯ ಈ ಸುದ್ದಿ ಅಭಿಮಾನಿಗಳಿಗೆ ಇನ್ನಷ್ಟು ಸಂತಸ ನೀಡಿದೆ. ಈಗಾಗಲೇ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಅದ್ದೂರಿಯಾದ ‘ಪುನೀತ ಪರ್ವ’ ಎಂಬ ಕಾರ್ಯಕ್ರಮಕ್ಕೆ ಕರುನಾಡು ಸಾಕ್ಷಿಯಾಗಲಿದೆ.

ಅಪ್ಪು ನಮ್ಮನ್ನ ಅಗಲಿದ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ‘ಪಿ ಆರ್ ಕೆ ಪ್ರೊಡಕ್ಷನ್ಸ್’ ನ ಜವಾಬ್ದಾರಿ ತೆಗೆದುಕೊಂಡಿದ್ದರು. ಅಪ್ಪು ಕನಸಿನ ‘ಗಂಧದಗುಡಿ’ ಸಿನಿಮಾದ ಪರವಾಗಿಯೂ ಕೂಡ ಸಕಲ ಸಾಮರ್ಥ್ಯ ಹಾಕಿ ಬಿಡುಗಡೆ ಮಾಡುವ ಪಣ ತೊಟ್ಟಿದ್ದರು. ಸದ್ಯ ಇದೇ ಅಕ್ಟೋಬರ್ 28ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಬರುವ ಹಿನ್ನೆಲೆಯ ಮಾತುಗಳಿಗೆ ಸ್ವತಃ ಅಶ್ವಿನಿ ಅವರೇ ಧ್ವನಿ ನೀಡಿರುವುದು ಅಭಿಮಾನಿಗಳಿಗಂತೂ ಅಪಾರ ಸಂತಸ ನೀಡಿದೆ. ಒಟ್ಟಿನಲ್ಲಿ ಅಪ್ಪು ನಮ್ಮನ್ನ ಅಗಲಿದ್ದರೂ ಸಹ ಅವರ ಆದರ್ಶ ಆಸೆಗಳು ಸದಾ ನಮ್ಮೊಂದಿಗಿರುತ್ತವೆ ಎಂಬುದಕ್ಕೆ ‘ಗಂಧದಗುಡಿ’ ಸಾಕ್ಷಿಯಾಗಿರಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ