ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕ ಸೂಪರ್ ಸ್ಟಾರ್ ಜಯಕೃಷ್ಣ ಆಲಿಯಾಸ್ ಜೆಕೆ ಆಗಿ ಕಿರುತೆರೆ ಅಂಗಳಕ್ಕೆ ಕಾಲಿಟ್ಟ ಚಾಕಲೇಟ್ ಹೀರೋ ಹೆಸರು ಜಯರಾಂ ಕಾರ್ತಿಕ್. ಮೊದಲ ಧಾರಾವಾಹಿಯಲ್ಲಿಯೇ ಸೂಪರ್ ಸ್ಟಾರ್ ಆಗಿ ನಟಿಸಿ ಸೀರಿಯಲ್ ಪ್ರಿಯರ ಅದರಲ್ಲೂ ಹೆಣ್ ಮಕ್ಕಳ ಮನಸ್ಸು ಗೆದ್ದ ಜಯರಾಂ ಕಾರ್ತಿಕ್ ಅವರು ಇದೀಗ ಹಿಂದಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಜಯರಾಂ ಕಾರ್ತಿಕ್ ಅವರು ಕನ್ನಡ ಕಿರುತೆರೆಯಿಂದ ದೂರವಿದ್ದರೂ ಪರಭಾಷೆಯ ಕಿರುತೆರೆಯಲ್ಲಿ ಅಬ್ಬರಿಸುವ ಅವಕಾಶವನ್ನು ಪಡೆದಿದ್ದರು. ಹೌದು, ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಿಯಾ ಕೆ ರಾಮ್ ಎನ್ನುವ ಧಾರಾವಾಹಿಯಲ್ಲಿ ರಾವಣ ಆಗಿ ಅಬ್ಬರಿಸುವ ಮೂಲಕ ಪರಭಾಷೆಯ ಕಿರುತೆರೆ ವೀಕ್ಷಕರ ದಿಲ್ ಗೆ ಕನ್ನ ಹಾಕಿದ್ದಾರೆ ಕನ್ನಡಿಗ ಜಯರಾಂ ಕಾರ್ತಿಕ್.

ಮಾನ್ ಸಿಂಗ್ ನಿರ್ದೇಶನದ ‘ಆಲಿಬಾಬಾ ದಸ್ತಾನ್-ಎ-ಕಾಬೂಲ್‘ ಎನ್ನುವ ಧಾರಾವಾಹಿಯಲ್ಲಿ ಖಳನಾಯಕ ಇಬ್ಲಿಸ್ ಆಗಿ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ ಜಯರಾಂ ಕಾರ್ತಿಕ್. ಇಬ್ಲಿಸ್ ಪಾತ್ರದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಜಯರಾಂ ಕಾರ್ತಿಕ್ “ಬಹುದಿನಗಳ ಕಾಯುವಿಕೆ ಇದೀಗ ಮುಗಿದಿದೆ. ಆಲಿಬಾಬ ಮತ್ತು ನಲುವತ್ತು ಜನ ಕಳ್ಳರು ಎನ್ನುವ ಸುಪ್ರಸಿದ್ಧ ಕಥೆಯಿಂದ ಬಹು ಸಣ್ಣ ಎಳೆಯೊಂದನ್ನು ತೆಗೆದುಕೊಂಡು ಈ ಧಾರಾವಾಹಿಯನ್ನು ಮಾಡಲಾಗಿದೆ. ಮತ್ತೊಮ್ಮೆ ಖಳನಾಗಿ ಅಬ್ಬರಿಸುವ ಅವಕಾಶ ದೊರಕಿದೆ. ಇಬ್ಲಿಸ್ ಆಗಿ ವೀಕ್ಷಕರ ಮನ ಸೆಳೆಯುತ್ತೇನೆ ಎಂಬ ನಂಬಿಕೆಯಿದೆ” ಎನ್ನುತ್ತಾರೆ ಜಯರಾಂ ಕಾರ್ತಿಕ್.
ಇದರ ಜೊತೆಗೆ ” ನೆಗೆಟಿವ್ ಛಾಯೆ ಇರುವ ಪಾತ್ರಗಳಲ್ಲಿ ನಟಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಅಂದು ರಾವಣನ ಪಾತ್ರ ಸಿಕ್ಕಿದಾಗ ಅದು ತುಂಬಾ ಸೊಗಸಾಗಿ ಮೂಡಿಬಂದಿತ್ತು. ರಾವಣನ ಪಾತ್ರವನ್ನು ರೂಪಿಸಿದ ರೀತಿಯನ್ನು ಇಷ್ಟಪಟ್ಟಿದ್ದರು. ಇದೀಗ ಮತ್ತೊಂದು ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿರುವ ಅವಕಾಶ ದೊರಕಿರುವುದು ಖುಷಿ ತಂದಿದೆ” ಎನ್ನುತ್ತಾರೆ.

“ನಾನು ಪೌರಾಣಿಕ ಧಾರಾವಾಹಿಯಲ್ಲಿ ಮೊದಲ ಬಾರಿ ನಟಿಸಿದ್ದು ರಾವಣನಾಗಿ. ಇದೀಗ ಮತ್ತೊಂದು ಧಾರಾವಾಹಿಯಲ್ಲಿ ನಾನು ಉತ್ತಮ ಪಾತ್ರದ ಮೂಲಕ ನಟಿಸಬಹುದಿತ್ತು. ಆದರೆ ಈಗಾಗಲೇ ನನ್ನ ನೆಗೆಟಿವ್ ಖದರ್ ನೋಡಿ ಇಷ್ಟಪಟ್ಟರುವ ಜನ ಪಾಸಿಟಿವ್ ಪಾತ್ರವನ್ನು ಸ್ವೀಕರಿಸುತ್ತಾರಾ ಎಂಬ ಭಯ ಸಹಜವಾಗಿ ಕಾಡಿತ್ತು. ಜೊತೆಗೆ ಇಬ್ಲಿಸ್ ಬಗ್ಗೆ ಕೇಳಿದಾಗ ಸಂತಸವಾಯಿತು. ಪ್ರಪಂಚದ ದುಷ್ಟ ವ್ಯಕ್ತಿ ಎಂದೇ ಪರಿಗಣಿಸಲ್ಪಡುವ ಇಬ್ಲಿಸ್ ನಾಗಿ ನಟಿಸುವುದು ಸಂತಸ ನೀಡಿದೆ” ಎನ್ನುತ್ತಾರೆ ಜಯರಾಂ ಕಾರ್ತಿಕ್.

ಇನ್ನು ಜಯರಾಂ ಕಾರ್ತಿಕ್ ಅವರು ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಕೆಂಪೇಗೌಡ ಸಿನಿಮಾ ಮೂಲಕ ಹಿರಿತೆರೆಗೆ ಹಾರಿದ ಜಯರಾಂ ಕಾರ್ತಿಕ್ ಮುಂದೆ ವಿಷ್ಣುವರ್ಧನ, ಜರಾಸಂಧ, ವರದನಾಯಕ, ಜಸ್ಟ್ ಲವ್, ಚಂದ್ರಿಕಾ, ಬೆಂಗಳೂರು 560023, ಕೇರ್ ಆಫ್ ಫುಟ್ ಪಾತ್ 2, ವಿಸ್ಮಯ, ಕುಚಿಕೂ ಕುಚಿಕೂ, ಆ ಕರಾಳ ರಾತ್ರಿ, ಮೇ 1, ಪುಟ 109 ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಓ ಪುಷ್ಪ ಐ ಹೇಟ್ ಟಿಯರ್ಸ್ ಎನ್ನುವ ಹಿಂದಿ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ