ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ಮಯೂರಿ ಕ್ಯಾತರಿ ತದ ನಂತರ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು! ಮುಂದೆ ಮದುವೆ, ಮಗ ಅಂಥ ನಟನೆಯಿಂದನೂ ಕೊಂಚ ಗ್ಯಾಪ್ ಪಡೆದುಕೊಂಡಿದ್ದ ಈಕೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಸ್ಪರ್ಧಿಯಾಗಿ ದೊಡ್ಮನೆಗೂ ಕಾಲಿಟ್ಟಿದ್ದರು.

ಒಂದೂವರೆ ವರ್ಷದ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಮಯೂರಿ ಕ್ಯಾತರಿ ಮೂರನೆಯ ವಾರಕ್ಕೆ ಮನೆಯಿಂದ ಹೊರಬಂದಿದ್ದಾರೆ. ಸುದೀಪರವರ ಜೊತೆ ಮಾತುಕತೆಯಿಲ್ಲದೆ ಮನೆಯಿಂದ ಹೊರಬಿದ್ದ ಕೆಲವೇ ಕೆಲವು ಸ್ಪರ್ಧಿಗಳಲ್ಲಿ ಇವರೂ ಒಬ್ಬರು.

ತಮ್ಮ “ಬಿಗ್ ಬಾಸ್” ಜರ್ನಿ ಮುಗಿದಿದ್ದರ ಬಗ್ಗೆ ಮಾತನಾಡಿದ ಅವರು “ನಾನು ಮನೆಗೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ನನ್ನ ಮಗನನ್ನು ಅಪ್ಪಿ ಮನಸೋ ಇಚ್ಛೆ ಅತ್ತಿದ್ದು. ಅದಾದ ಮೇಲೆ ಗಂಡ ಕುಟುಂಬದವರೊಟ್ಟಿಗೆ ಒಳ್ಳೆ ರೀತಿಯಲ್ಲಿ ಕಾಲ ಕಳೆದೆ. ನನ್ನಿಷ್ಟದ ತಿಂಡಿ ತಿನಿಸೆಲ್ಲಾ ಮನೆಯವರಿಂದ ಮಾಡಿಸಿಕೊಂಡು ತಿಂದೆ. ಮಗನನ್ನು ನೋಡಿದಾಗಿನ ಆ ಕ್ಷಣದ ಖುಷಿಯೇ ಬೇರೆ, ಜಗತ್ತಿನಲ್ಲಿ ಮತ್ತೇನೂ ಆ ಅನುಭವಕ್ಕೆ ಸಾಟಿ ಇಲ್ಲ! ಇದು ಎಲ್ಲಾ ತಾಯಂದಿರಿಗೂ ಚೆನ್ನಾಗಿ ಅರ್ಥವಾಗುತ್ತೆ. ಅಂದು ರಾತ್ರಿ ಇಡೀ ನನ್ನ ಮಗನಿಗೆ ಹಾಡು ಹೇಳುತ್ತಾ ನಿದ್ದೆ ಮಾಡಿಸಿದೆ.”

ಬಿಗ್ ಬಾಸ್ ಮನೆಯೊಳಗಿನ ಅನುಭವದ ಬಗ್ಗೆ ಹೇಳುವುದಾದರೆ “ನಾನು ಅಲ್ಲಿಗೆ ಹೋಗೋಕೆ ಒಪ್ಪಿದ್ದೇ ಒಂದು ಒಳ್ಳೆಯ ಅನುಭವ ಸಿಗುತ್ತದೆ ಎಂದು. ಅದಕ್ಕಾಗಿಯೇ ನಾನು ತುಂಬಾ ದಿನಗಳಿಂದ ನನ್ನನ್ನು ನಾನು ಮಾನಸಿಕವಾಗಿ ತಯಾರು ಮಾಡಿಕೊಳ್ಳುತ್ತಿದ್ದೆ. ನಾನಲ್ಲಿಗೆ ಹೋಗುವುದೇ ಹೌದಾದರೆ ಒಂದೇ ವಾರಕ್ಕೆ ವಾಪಾಸ್ ಬರಬಹುದು ಅಂತಲೂ ಎಣಿಸಿದ್ದೆ. ಆದರೆ ಮೂರು ವಾರ ಇದ್ದೆ ಅನ್ನುವ ಖುಷಿ ಇದೆ. ನನ್ನ ಮಗನನ್ನು ಬಿಟ್ಟಿರುವುದೇ ನನಗೆ ತುಂಬಾ ದೊಡ್ಡ ಚಾಲೆಂಜಾಗಿತ್ತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ನೋಡಿದಷ್ಟು ಸುಲಭ ಅಲ್ಲ” ಎಂದಿದ್ದಾರೆ.

“ಅಲ್ಲಿ ನಾವು ಜನರೊಂದಿಗೆ ಪರಿಚಯ ಮಾಡಿಕೊಳ್ಳಬಹುದು ಅಂತ ಬಿಟ್ಟರೆ ಸ್ನೇಹ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಯಾಕಂದರೆ ಪ್ರತಿಯೊಬ್ಬರೂ ಶೋನ ಗೆಲ್ಲುವ ಗುರಿಯ ಕಡೆಗೆ ಹೆಚ್ಚು ಫೋಕಸ್ಡ್ ಆಗಿರುತ್ತಾರೆ. ಆದರೆ ನಾವು ಪ್ರತಿ ದಿನ ಪ್ರತಿ ಕ್ಷಣನೂ ಹಲವಾರು ವಿಚಾರಗಳನ್ನು ಕಲಿಯುವುದಂತೂ ಹೌದು. ಮುಖ್ಯವಾಗಿ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ನಾನು ಬಿಗ್ ಬಾಸ್ ಅಲ್ಲಿ ಕಲಿತೆ”ಎನ್ನುತ್ತಾರೆ ಮಯೂರಿ

“ಏನೇ ಅಂದ್ರೂ ನಾನು ಸುದೀಪ್ ಸರ್ ನ ಭೇಟಿಯಾಗದೆ ಬಂದಿದ್ದು ಬೇಸರ ಆಯ್ತು. ಎಲ್ಲರ ಹಾಗೆ ನನ್ನದೂ ಒಂದು ಬಿಗ್ ಬಾಸ್ ಜರ್ನಿಯ ವಿಟಿ ನೋಡಬೇಕು ಅನ್ನುವ ಆಸೆ ಇತ್ತು. ಅದು ಬಿಟ್ಟರೆ ಬಿಗ್ ಬಾಸ್ ಒಂದೊಳ್ಳೆಯ ಅನುಭವ ಅನ್ನುವುದಂತೂ ಹೌದು. ಈ ನಟನೆಯ ಫೀಲ್ಡಿಗೆ ಬಂದು 11 ವರ್ಷವಾಯ್ತು, ಒಂದು ಧಾರಾವಾಹಿ ಹಾಗೂ ಹಲವು ಚಿತ್ರಗಳನ್ನು ಮಾಡಿದ್ದೀನೆ. ಇನ್ನು ಮುಂದೆಯೂ ಮಾಡ್ತೀನಿ. ನನಗೆ ಜೀವನದಲ್ಲಿ ಅಲ್ಪವಿರಾಮಗಳು ಬೇಕಷ್ಟೇ ಹೊರತು ಪೂರ್ಣವಿರಾಮವಲ್ಲ. ಸದಾ ಪ್ರೋತ್ಸಾಹಿಸುವ ಕುಟುಂಬ ಇರುವುದರಿಂದ ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡುವ ಯೋಚನೆ ಇದೆ.” ಎಂದರು ನಟಿ ಮಯೂರಿ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ