ಕ್ರೇಜಿಬಾಯ್ ಸಿನಿಮಾ ಮೂಲಕ ಬಣ್ಣದ ಕ್ಷೇತೃಕ್ಕೆ ಕಾಲಿಟ್ಟಿರುವ ಆಶಿಕಾ ರಂಗನಾಥ್ ಮನೋಜ್ಞ ನಟನೆಯ ಮೂಲಕ ಸಿನಿಮಾ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆ. ಕ್ರೇಜಿ ಬಾಯ್ ನಂತರ ಮಾಸ್ ಲೀಡರ್, ಮುಗುಳುನಗೆ, ರಾಜು ಕನ್ನಡ ಮೀಡಿಯಂ, ರ್ಯಾಂಬೋ 2, ತಾಯಿಗೆ ತಕ್ಕ ಮಗ, ಮದಗಜ, ಜೇಮ್ಸ್, ಅವತಾರ ಪುರುಷ, ಗರುಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಚುಟುಚುಟು ಬೆಡಗಿ ಜೇಮ್ಸ್ ಹಾಗೂ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.

ರೆಮೋ, 02, ಗತವೈಭವ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಪಟಾಕಿ ಪೋರಿ ಖ್ಯಾತಿಯ ಆಶಿಕಾ ರಂಗನಾಥ್ ಮದಗಜ ಸಿನಿಮಾದ ನಟನೆಗಾಗಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದರು. ಇಂತಿಪ್ಪ ಮುಗುಳುನಗೆ ಕುವರಿ ಇದೀಗ ತಮಿಳು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ಆ ಮೂಲಕ ಪರಭಾಷೆಯ ಸಿನಿಮಾ ಕ್ಷೇತ್ರದಲ್ಲಿ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ. ಸಂತಸದ ವಿಚಾರವೆಂದರೆ ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್ ತಮ್ಮ ನೆಚ್ಚಿನ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ತಮಿಳಿನ ಇನ್ನೂ ಹೆಸರಿಡಬೇಕಾದ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರು ಅಭಿನಯಿಸಿದ್ದು ಅದರಲ್ಲಿ ತಮ್ಮ ನೆಚ್ಚಿನ ನಟ ಸಿದ್ಧಾರ್ಥ್ ಜೊತೆಗೆ ನಟಿಸಲಿದ್ದಾರೆ ಆಶಿಕಾ.
“ಸಿದ್ಧಾರ್ಥ್ ಅಭಿನಯದ ಬೊಮ್ಮರಿಲ್ಲು, ನಿವಸ್ತಾನಂಟೆ ನಾ ವದ್ದಾನಾ ಸಿನಿಮಾ ಅಂದರೆ ನನಗೆ ತುಂಬಾ ಇಷ್ಟ. ಸಿದ್ಧಾರ್ಥ್ ನನ್ನ ನೆಚ್ಚಿನ ನಟ. ಅವರ ಅಭಿನಯದ ಈ ಸಿನಿಮಾಗಳನ್ನು ನಾನು ಅದೆಷ್ಟು ಬಾರಿ ನೋಡಿದ್ದೇನೋ ಲೆಕ್ಕವೇ ಇಲ್ಲ” ಎನ್ನುವ ಆಶಿಕಾ ಇದೀಗ ತಮ್ಮ ನೆಚ್ಚಿನ ನಟನ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಎನ್. ರಾಜಶೇಖರ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ಅತೀ ಸರಳವಾಗಿ ಚೆನ್ನೈ ನಲ್ಲಿ ನಡೆದಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು ಆಶಿಕಾ ರಂಗನಾಥ್ ಸಕತ್ ಖುಷಿಯಲ್ಲಿದ್ದಾರೆ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ