ಕಿರುತೆರೆಯ ಜನಪ್ರಿಯ ವಾಹಿನಿಗಳ ಪೈಕಿ ಒಂದಾಗಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜೀ ಕುಟುಂಬ ಅವಾರ್ಡ್ಸ್ ನಡೆದಿದ್ದು ಜನ ಮೆಚ್ಚಿದ ನಿರೂಪಕಿ ಪ್ರಶಸ್ತಿ ಮಾತಿನಮಲ್ಲಿ ಅನುಶ್ರೀ ಮುಡಿಗೇರಿದೆ.
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅನುಶ್ರೀ ಅವರಿಗೆ “ಜನಮೆಚ್ಚಿದ ನಿರೂಪಕಿ” ಪ್ರಶಸ್ತಿಯನ್ನು ಅನುಶ್ರೀಗೆ ನೀಡಿ ಶುಭಹಾರೈಸಿದರು.

ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ನಿರೂಪಕಿಯಾಗಿ ತಮ್ಮ ಕಲೆಯ ಮೂಲಕ ಎಲ್ಲರ ಮನೆಮಾತಾಗಿರುವ ಅನುಶ್ರೀ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇತ್ಯಾದಿ ಕಾರ್ಯಕ್ರಮಗಳನ್ನು ಅದ್ಭುತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಈ ಬಾರಿಯ ‘ಜನಮೆಚ್ಚಿದ ನಿರೂಪಕಿ’ ಪ್ರಶಸ್ತಿಯನ್ನು ಗೆದ್ದಿದ್ದೂ ಅಲ್ಲದೇ ತನ್ನ ಪ್ರೀತಿಯ ನಟನ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರಶಸ್ತಿ ಪ್ರಧಾನ ಮಾಡಿದ್ದು ವಿಶೇಷ. ಈ ಸಮಯದಲ್ಲಿ ತುಸು ಭಾವುಕರಾದ ಅನುಶ್ರೀ ತಮಗೆ ಸಿಕ್ಕ ಪ್ರಶಸ್ತಿಯನ್ನು ಮೆಚ್ಚಿನ ನಟ ಅಪ್ಪು ಅವರಿಗೆ ಅರ್ಪಿಸಿದರು.

ಅನುಶ್ರೀ ಅವರ ಮಾತೇ ಚಂದ ವೇದಿಕೆಯ ಮೇಲೆ ನಿಂತರೆ ಚಟಪಟ ಎಂದು ತಮ್ಮ ನಿರರ್ಗಳ ಮಾತು, ಭಾಷಾ ಜ್ಞಾನದಿಂದಲೇ ಕನ್ನಡಿಗರ ಮನ ಗೆದ್ದಿದ್ದಾರೆ. ಅವರ ನಿರೂಪಣೆಯ ಸ್ಟೈಲ್ ಎಲ್ಲರಿಗೂ ಅಚ್ಚುಮೆಚ್ಚು. ‘ಜನಮೆಚ್ಚಿದ ನಿರೂಪಕಿ’ ಪ್ರಶಸ್ತಿ ಪಡೆಯುತ್ತಿದ್ದಂತೆ ಭಾವುಕರಾದ ಅನುಶ್ರೀ ಚಂದನವನದ ಪವರ್ ಸ್ಟಾರ್ ದಿ|ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಮಾತನಾಡಿದ್ದಾರೆ.

ವೇದಿಕೆಯಲ್ಲೇ ಭಾವುಕರಾದ ಅವರು “ಅಪ್ಪು ಸರ್ ಐ ಲವ್ ಯೂ. ನನಗೆ ನೀವು ಎಲ್ಲಾ ಸಮಯದಲ್ಲೂ ಸಪೋರ್ಟ್ ಮಾಡಿದ್ದೀರಿ. ನನಗೆ ನೀವೇ ಸ್ಟ್ರೆಂಥ್! ಪುನೀತ್ ಪರ್ವ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ತುಂಬಾ ಜನ ಸೇರಿದ್ದರು. ಇಷ್ಟೆಲ್ಲಾ ಜನ ಸೇರಿದ್ದಾರೆ, ಸಾವಿರಾರು ಜನ ಈ ಕಾರ್ಯಕ್ರಮವನ್ನು ನೋಡುತ್ತಿದ್ದಾರೆ. ಆದರೆ ಯಾರಿಗಾಗಿ ಮಾಡುತ್ತಿದ್ದೆವೋ ಅವರೆ ಈ ಕಾರ್ಯಕ್ರಮವನ್ನು ನೋಡುತ್ತಿಲ್ಲ ಎನ್ನುವ ಸಂಕಟ ಆಗುತ್ತದೆ. ಎಮೋಷನಲಿ ತುಂಬಾನೇ ಸ್ಟ್ರೆಸ್ ಆಗುತ್ತದೆ. ಅಶ್ವಿನಿ ಮೇಡಂ ಕೂಡ ಪ್ರತಿ ಹೆಜ್ಜೆಯಲ್ಲೂ ನಮಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅಪ್ಪು ಸರ್ ಥ್ಯಾಂಕ್ಯು ಸೊ ಮಚ್, ವಿ ಮಿಸ್ ಯು.” ಎಂದು ಗಳಗಳನೆ ಅಳುತ್ತಾ ತಮಗೆ ಸಿಕ್ಕ ಪ್ರಶಸ್ತಿಯನ್ನು ಅಪ್ಪು ಅವರಿಗೆ ಅರ್ಪಿಸಿದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ