ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಮಲಿಯು ಇತ್ತೀಚೆಗಷ್ಟೇ ತನ್ನ ಪ್ರಸಾರ ನಿಲ್ಲಿಸಿದೆ. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸುತ್ತಿದ್ದ ಕಮಲಿ ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪ್ರಸಾರ ನಿಲ್ಲಿಸಿದೆ. ಕಮಲಿ ಧಾರಾವಾಹಿಯಲ್ಲಿ ಖಳನಾಯಕಿ ಅನಿಕಾ ಮಹಾಜನ್ ಆಗಿ ಅಭಿನಯಿಸುವ ಮೂಲಕ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಗೇಬ್ರಿಯಲಾ ಸ್ಮಿತ್ ತಮ್ಮ ಪಯಣದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

“ಕಮಲಿ… ಇದು ಅಕ್ಷರಶಃ ಜೀವನವನ್ನು ಬದಲಾಯಿಸಿದ ಯೋಜನೆ. ಕಮಲಿಯಲ್ಲಿ ನಾನು ಅನಿಕಾ ಮಹಾಜನ್ ಪಾತ್ರಕ್ಕೆ ಜೀವ ತುಂಬಿದ್ದೆ. ಇದು ನನ್ನ ಪಾಲಿಗೆ ಕನಸಿನ ಪಾತ್ರವಾಗಿತ್ತು. ಇನ್ನು ಈ ಸುಂದರ ಪಯಣ ನನ್ನಲ್ಲಿ ಶಾಶ್ವತ ನೆನಪುಗಳನ್ನು ಉಳಿಸಿದೆ” ಎಂದು ಗೇಬ್ರಿಯಲಾ ಸ್ಮಿತ್ ಬರೆದುಕೊಂಡಿದ್ದಾರೆ.

“ನನಗೆ ಅನಿಕಾ ಮಹಾಜನ್ ಪಾತ್ರ ನೀಡಿದ ಜೀ ಕನ್ನಡ ಚಾನೆಲ್ ಗೆ, ರಾಘವೇಂದ್ರ ಹುಣಸೂರು ಸರ್ ಗೆ, ಕಮಲಿಯ ಎಲ್ಲಾ ಅದ್ಭುತ ನಿರ್ದೇಶಕರುಗಳಿಗೆ, ನಮ್ಮ ಎಲ್ಲಾ ತಂತ್ರಜ್ಞರಿಗೆ, ಪ್ರೊಡಕ್ಷನ್ ತಂಡಗಳಿಗೆ ಧನ್ಯವಾದಗಳು. ಇದರ ಜೊತೆಗೆ ಶೂಟಿಂಗ್ ಸೆಟ್ ನಲ್ಲಿ ಕುಟುಂಬದವರಂತೆ ಇದ್ದ ಪ್ರತಿಯೊಬ್ಬ
ಕಲಾವಿದರಿಗೆ ಹಾಗೂ ಇಷ್ಟು ವರ್ಷಗಳ ಕಾಲ ನಮಗೆ ಪ್ರೀತಿ ನೀಡಿ ಪ್ರೋತ್ಸಾಹ ನೀಡಿದ ನಮ್ಮ ಪ್ರೇಕ್ಷಕರಿಗೆ ಎಂದೆಂದಿಗೂ ಚಿರಋಣಿ. ಇದು ತುಂಬಾ ವಿಶೇಷವಾದ ಪ್ರಯಾಣವಾಗಿತ್ತು. ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ ಗೇಬ್ರಿಯಲಾ ಸ್ಮಿತ್.

ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಗೇಬ್ರಿಯಲಾ ನಟನಾ ಪಯಣಕ್ಕೆ ಮುನ್ನುಡಿ ಬರೆದುದು ಮಾಡೆಲಿಂಗ್. ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಗೇಬ್ರಿಯಲಾ ಮೊದಲ ಬಾರಿ ಕ್ಯಾಟ್ ವಾಕ್ ಮಾಡಿದಾಗ ಕೇವಲ 17 ವರ್ಷ. ಮಾಡೆಲಿಂಗ್ ಜಗತ್ತಿನಲ್ಲಿ ಪಳಗಿದ ಗೇಬ್ರಿಯಲಾ ಮುಂದೆ ಖಾಸಗಿ ಕಂಪೆನಿಯಲ್ಲಿ ಕೆಲಸವನ್ನು ಕೂಡಾ ಪಡೆದರು.

ಕೊಂಚ ಸಮಯ ಕೆಲಸ ಮಾಡಿದ ಗೇಬ್ರಿಯಲಾ ಗೆ ನಟನಾ ಕ್ಷೇತ್ರದತ್ತ ಮೊದಲಿನಿಂದಲೂ ಮನಸ್ಸಿತ್ತು. ಕೊನೆಗೆ ನಟನೆಯಲ್ಲಿ ಮುಂದುವರಿಯುವ ದೃಢ ನಿರ್ಧಾರ ಮಾಡಿದ ಈಕೆ ಧಾರಾವಾಹಿಯ ಜೊತೆಗೆ ಸಿನಿಮಾ ಆಡಿಶನ್ ಗಳಲ್ಲಿ ಭಾಗವಹಿಸಲಾರಂಭಿಸಿದರು.

ಕಿಚ್ಚ ಸುದೀಪ್ ಅಭಿನಯದ ವರದನಾಯಕ ಸಿನಿಮಾದಲ್ಲಿ ಸಣ್ಣಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಗೇಬ್ರಿಯಲಾ ನಂತರ ವಿಕ್ಟರಿ ,ಗೆಸ್ಟ್ ಹೌಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಬಾರಿ ಬಣ್ಣ ಹಚ್ಚಿದ್ದು ಕಮಲಿ ಧಾರಾವಾಹಿಯಲ್ಲಿ.

ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿಯೇ ಅಬ್ಬರಿಸಿದ್ದ ಗೇಬ್ರಿಯಲಾ ಇಂದು ಅನಿಕಾ ಮಹಾಜನ್ ಆಗಿ ಮನೆ ಮಾತಾಗಿದ್ದಾರೆ ಎಂಬುದಕ್ಕೆ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಆಕೆ ಪಡೆದ ಬೆಸ್ಟ್ ವಿಲನ್ ಪ್ರಶಸ್ತಿಯೇ ಪ್ರತ್ಯಕ್ಷ ಸಾಕ್ಷಿ. ಇನ್ನು ಮುರುಗ ಆಲಿಯಾಸ್ ಮುನಿಕೃಷ್ಣ ನಿರ್ದೇಶನದ ಕೊಡೆಮುರುಗ ಸಿನಿಮಾದಲ್ಲಿ ನಾಯಕಿಯಾಗಿ ಮೋಡಿ ಮಾಡಲಿರುವ ಗೇಬ್ರಿಯಲಾ ಮುಂದಿನ ದಿನಗಳಲ್ಲಿ ಮತ್ತೆ ಕಿರುತೆರೆಗೆ ಬರುತ್ತಾರಾ ಎಂದು ಕಾದುನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ