ಅರಳು ಹುರಿದಂತೆ ಪಟಪಟನೆ ಮಾತಾನಾಡುತ್ತಾ, ತನ್ನ ಮಾತಿನ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುವ ಅಕುಲ್ ಬಾಲಾಜಿ ನಿರೂಪಕರಾಗಿ ಕಿರುತೆರೆಯಲ್ಲಿ ಸೈ ಎನಿಸಿಕೊಂಡವರು. ನಿರೂಪಣೆಯ ಮೂಲಕ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಅಕುಲ್ ಬಾಲಾಜಿ ಇದೀಗ ತೆಲುಗು ಕಿರುತೆರೆಯಲ್ಲಿ ನಿರೂಪಣೆಯ ಮೂಲಕ ಸದ್ದು ಮಾಡುತ್ತಿದ್ದಾರೆ. ಹೌದು, ಜೀ ತೆಲುಗು ವಾಹಿನಿಯಲ್ಲಿ ಇತ್ತೀಚೆಗಷ್ಟೇ ಶುರುವಾದ ಹೊಚ್ಚ ಹೊಸ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಿರೂಪಕರಾಗಿ ಅಕುಲ್ ಬಾಲಾಜಿ ಮೋಡಿ ಮಾಡುತ್ತಿದ್ದಾರೆ.

ಇದರ ಬಗ್ಗೆ ಮಾತನಾಡಿರುವ ಅಕುಲ್ ಬಾಲಾಜಿ “ತೆಲುಗು ಕಿರುತೆರೆ ನನಗೆ ಹೊಸದೇನಲ್ಲ. ನಾನು ಈಗಾಗಲೇ ತೆಲುಗಿನ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದೇನೆ. ಆದರೆ ತೆಲುಗಿನಲ್ಲಿ ನಿರೂಪಣೆ ನನಗೆ ಹೊಸತು. ಆ್ಯಂಕರ್ ಆಗಿ ತೆಲುಗು ಕಿರುತೆರೆಗೆ ಕಾಲಿಟ್ಟಿರುವುದು ನನಗೆ ಖುಷಿ ತಂದಿದೆ” ಎನ್ನುತ್ತಾರೆ.

“ನಾನು ಡ್ಯಾನ್ಸ್ ರಿಯಾಲಿಟಿ ಶೋ ಕುಣಿಯೋಣು ಬಾರಾದ ನಿರೂಪಕನಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟವನು. ಇದೀಗ ತೆಲುಗಿನಲ್ಲೂ ಡ್ಯಾನ್ಸ್ ರಿಯಾಲಿಟಿ ಶೋ ವಿನ ನಿರೂಪಣೆ ಮಾಡುವ ಅವಕಾಶ ದೊರಕಿದೆ. ಇನ್ನು ನಾನು ಇದೇ ಮೊದಲ ಬಾರಿಗೆ ತೆಲುಗು ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದೇನೆ ನಿಜ, ಆದರೆ ಅಲ್ಲಿನ ಸ್ಪರ್ಧಿಗಳಲ್ಲಿ ಹೆಚ್ಚಿನವರು ಕರ್ನಾಟಕದವರೇ ಆದ ಕಾರಣ ಮನೆಯ ವಾತಾವರಣ ಸೃಷ್ಟಿಯಾಗಿದೆ” ಎನ್ನುತ್ತಾರೆ ಅಕುಲ್ ಬಾಲಾಜಿ.

ಇದರ ಜೊತೆಗೆ “ನನಗೆ ಇಂದು ಎಲ್ಲವನ್ನು ನೀಡಿದ ನಾಡು ಕರ್ನಾಟಕ. ಕನ್ನಡ ಕಿರುತೆರೆಯ ವೀಕ್ಷಕರು ನೀಡಿದ ಪ್ರೀತಿ, ಪ್ರೋತ್ಸಾಹದಿಂದಲೇ ನಾನು ಇಂದು ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಶೋ ವಿನ ಮೇಲೆ ಶೋ, ಬರೋಬ್ಬರಿ 16 ವರ್ಷಗಳಿಂದ ನಾನು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೂ ಅವರೇ ಕಾರಣ. ನಾನು ಇಂದು ಆಂಧ್ರಕ್ಕೆ ಹೋದರೂ ಅಲ್ಲಿನವರು ನನ್ನನ್ನು ಮೊದಲು ಕನ್ನಡದ ಪ್ರತಿಭೆ ಎಂದು ಗುರುತಿಸುತ್ತಾರೆ. ಸಂತಸವಾಗುತ್ತಿದೆ” ಎನ್ನುತ್ತಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ