ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಸಾಲಿಗೆ ಸೇರಿರುವ “ಅಗ್ನಿಸಾಕ್ಷಿ” ಯು ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದೆ. ಬರೋಬ್ಬರಿ ಎಂಟು ವರ್ಷಗಳ ಕಾಲ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದ ಅಗ್ನಿಸಾಕ್ಷಿ ಧಾರಾವಾಹಿಯು ಮುಗಿದು ವರ್ಷ ಮೂರು ಆಗುತ್ತಾ ಬಂತು. ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ – ನಾಯಕಿ ಈಗೇನು ಮಾಡುತ್ತಿದ್ದಾರೆ ಎಂಭ ಕುತೂಹಲ ನಿಮಗಿರುವುದು ಸಹಜ. ಅಂದ ಹಾಗೇ ಈ ಲೇಖನ ನಿಮ್ಮ ಕುತೂಹಲಕ್ಕೆ ಫುಲ್ ಸ್ಟಾಪ್ ಇಡಲಿದೆ.

ವಿಜಯ್ ಸೂರ್ಯ
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ಆಗಿ ನಟಿಸಿದ್ದ ಗುಳಿಕೆನ್ನೆಯ ಹುಡುಗ ವಿಜಯ್ ಸೂರ್ಯ ಮನೋಜ್ಞ ನಟನೆಯ ಮೂಲಕ ಮನೆ ಮಾತಾದ ಹ್ಯಾಂಡ್ ಸಮ್ ಹುಡುಗ. ಉತ್ತರಾಯಣ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ವಿಜಯ್ ಸೂರ್ಯ ನಂತರ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಸಿದ್ದಾರ್ಥ್ ಆಗಿಯೇ ಕಾಣಿಸಿಕೊಂಡರು. ನಂತರ ಅಗ್ನಿಸಾಕ್ಷಿಯಲ್ಲಿಯೂ ಸಿದ್ಧಾರ್ಥ್ ಆಗಿ ನಟಿಸಿ ಸೈ ಎನಿಸಿಕೊಂಡ ವಿಜಯ್ ಸೂರ್ಯ ಬರೋಬ್ಬರಿ ಎಂಟು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದರು. ಸೀರಿಯಲ್ ಪ್ರಿಯರ ಅದರಲ್ಲೂ ಹೆಣ್ ಮಕ್ಕಳ ಆರಾಧ್ಯ ದೈವವೇ ಆಗಿದ್ದ ವಿಜಯ್ ಸೂರ್ಯ
ಅಭಿನಯಕ್ಕೆ ಫಿದಾ ಆಗದವರಿಲ್ಲ.

ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯಕಾಂತ್ ಪಾತ್ರಕ್ಕೆ ಜೀವ ತುಂಬಿದ ವಿಜಯ್ ಸೂರ್ಯಗೆ ಹೆಸರು ಹಾಗೂ ಜನಪ್ರಿಯತೆ ನೀಡಿದ್ದು ಸಿದ್ಧಾರ್ಥ್ ಪಾತ್ರ. ಧಾರಾವಾಹಿ ಮುಗಿದು ವರ್ಷ ಮೂರಾಗುತ್ತಾ ಬಂದರೂ ಜನ ಇಂದಿಗೂ ಅವರನ್ನು ಗುರುತಿಸುವುದು ಅದೇ ಪಾತ್ರದಿಂದ. ಮುಂದೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ ಇತ್ತೀಚೆಗೆ ಮುಕ್ತಾಯಗೊಂಡ ರಾಜಿ ಧಾರಾವಾಹಿಯಲ್ಲಿಯೂ ಅತಿಥಿಯಾಗಿ ಮೋಡಿ ಮಾಡಿದರು.

ಕ್ರೇಜಿಲೋಕ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ವಿಜಯ್ ಸೂರ್ಯ ನಂತರ ಇಷ್ಟಕಾಮ್ಯ, ಸ, ಕದ್ದು ಮುಚ್ಚಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಅವರು ವೀರ ಪುತ್ರ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದು ಕಿರುತೆರೆಗೆ ಮರಳಿ ಬರುತ್ತಾರಾ ಎಂದು ಕಾದುನೋಡಬೇಕಾಗಿದೆ.

ವೈಷ್ಣವಿ ಗೌಡ
ದೇವಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ವೈಷ್ಣವಿ ಗೌಡ ಗೆ ಜನಪ್ರಿಯತೆ ನೀಡಿದ್ದು ಸನ್ನಿಧಿ ಪಾತ್ರ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿಯಾಗಿ ಕರುನಾಡಿನಾದ್ಯಂತ ಮನೆ ಮಾತಾಗಿರುವ ವೈಷ್ಣವಿ ಗೌಡ ಮನೋಜ್ಞ ನಟನೆಯ ಮೂಲಕ ಮನ ಸೆಳೆದ ಚೆಲುವೆ.

ಸೀರಿಯಲ್ ನಂತರ ರಿಯಾಲಿಟಿ ಶೋವಿನತ್ತ ಚಿತ್ತ ಹರಿಸಿದ ಗುಳಿ ಕೆನ್ನೆಯ ಹುಡುಗಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೊಇ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡ ಬೆಡಗಿ. ತದ ನಂತರ ಸಿನಿಮಾ ಅಂಗಳಕ್ಕೆ ಕಾಲಿಟ್ಟ ವೈಷ್ಣವಿ ಗೌಡ ಅವರ ಹಿರಿತೆರೆ ಪಯಣ ಶುರುವಾಗಿದ್ದು ಗಿರ್ ಗಿಟ್ಲೆ ಸಿನಿಮಾದಿಂದ.

ತದ ನಂತರ ಬಹುಕೃತ ವೇಷಂ ಸಿನಿಮಾದಲ್ಲಿ ನಾಯಕಿ ನಕ್ಷತ್ರ ಆಗಿ ಕಾಣಿಸಿಕೊಂಡಿರುವ ವೈಷ್ಣವಿ ಗೌಡ ಸದ್ಯ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಹಿರಿತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಅವಕಾಶ ಪಡೆಯುತ್ತಿರುವ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದುನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ