ನವರಸ ನಾಯಕ ಜಗ್ಗೇಶ್ ಹಾಗೂ ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ಕಾಂಬೀನೇಷನ್ ನ ಎರಡನೇ ಸಿನಿಮಾ ತೋತಾಪುರಿ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಭಾವೈಕ್ಯತೆಯ ಕಥಾಹಂದರವನ್ನು ಒಳಗೊಂಡಿರುವ ತೋತಾಪುರಿ ಸಿನಿಮಾದಲ್ಲಿ ದಾವಣಗೆರೆಯ ಬೆಣ್ಣೆ ಬೆಡಗಿ ಅದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತೋತಾಪುರಿ ಸಿನಿಮಾದಲ್ಲಿ ಸ್ವಾಭಿಮಾನಿ ಮುಸ್ಲಿಂ ಯುವತಿಯಾಗಿ ಅಭಿನಯಿಸಿರುವ ಅದಿತಿ ಪ್ರಭುದೇವ ” ಈ ಸಿನಿಮಾ ನನ್ನ ಬಣ್ಣದ ಬದುಕಿಗೆ ಅತಿ ದೊಡ್ಡ ತಿರುವನ್ನು ನೀಡುತ್ತದೆ” ಎಂದು ಹೇಳಿದ್ದಾರೆ. ಇದರ ಜೊತೆಗೆ “ಈ ಸಿನಿಮಾವು ಮನುಷ್ಯತ್ವದ ತಳಹದಿಯ ಮೇಲೆ ನಿರ್ಮಾಣವಾಗಿರುವ ಸಿನಿಮಾ. ಯಾಕೆಂದರೆ ಈ ಸಿನಿಮಾದಲ್ಲಿ ನಮ್ಮ ವೇಷಭೂಷಣಗಳು ಮಾತ್ರ ನಮ್ಮ ಧರ್ಮವನ್ನು ಪ್ರತಿನಿಧಿಸುತ್ತದೆ. ಆದರೆ ಮನಸ್ಸುಗಳು ಮನುಷ್ಯತ್ವವನ್ನು ಹೇಳುತ್ತದೆ. ವಿಭಿನ್ನ ರೀತಿಯ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುವುದರಲ್ಲಿ ಸಂಶಯವಿಲ್ಲ” ಎಂದಿದ್ದಾರೆ.

“ವಿಜಯ್ ಪ್ರಸಾದ್ ಅವರ ಸಿನಿಮಾ ಎಂದರೆ ಅದರಲ್ಲಿ ಡಬಲ್ ಮೀನಿಂಗ್ ಇರುವ ಡೈಲಾಗ್ ಗಳೇ ಜಾಸ್ತಿ ಅಂಥ ಹೇಳುತ್ತಾರೆ. ಆದರೆ ಖಂಡಿತವಾಗಿಯೂ ನನಗೆ ಆ ಥರದ ಅನುಭವವಾಗಿಲ್ಲ. ಇನ್ನು ಈ ಸಿನಿಮಾದಲ್ಲಿ ಕಥೆಗೆ ಪ್ರಾಮುಖ್ಯತೆ ಜಾಸ್ತಿ. ಮಾತ್ರವಲ್ಲ ಕೌಟುಂಬಿ ಮೌಲ್ಯಗಳನ್ನು ಈ ಸಿನಿಮಾ ಎತ್ತಿ ತೋರಿಸಲಿದೆ. ಒಟ್ಟಿನಲ್ಲಿ ಕುಟುಂಬಸ್ಥರು ಜೊತೆಯಾಗಿ ಹೋಗಿ ನೋಡಬಹುದಾದ ಸಿನಿಮಾ ಇದು” ಎನ್ಙುತ್ತಾರೆ ಅದಿತಿ ಪ್ರಭುದೇವ.

ಇನ್ನು ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡಿರುವ ಬೆಣ್ಣೆ ಬೆಡಗಿ “ಶೂಟಿಂಗ್ ಅನುಭವವಂತೂ ಸಕತ್ ಆಗಿತ್ತು. ಯಾಕೆಂದರೆ ವಿಜಯ ಪ್ರಸಾದ್ ಅವರು ಇಲ್ಲಿ ನಟನೆಗಿಂತ ಜಾಸ್ತಿ ನೈಜವಾಗಿ ಏನು ಸಿಗುತ್ತದೋ ಅದನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅದೇ ಕಾರಣದಿಂದ ಈ ಸಿನಿಮಾ ಪ್ರೇಕ್ಷಕರಿಗೆ ಬಹುಬೇಗನೇ ಕನೆಕ್ಟ್ ಆಗಲಿದೆ” ಎನ್ನುತ್ತಾರೆ.

ಇದರ ಜೊತೆಗೆ “ಈ ಸಿನಿಮಾದಲ್ಲಿ ಹಲವು ಧರ್ಮಗಳ ಪ್ರಸ್ತಾಪವಿದ್ದರೂ, ಧರ್ಮಕ್ಕಿಂತಲೂ ಮನುಷ್ಯನ ಮನಸ್ಸು ಮುಖ್ಯ ಎಂಬ ಅರ್ಥವನ್ನು ಬಿಂಬಿಸುತ್ತದೆ.
ಇನ್ನು ಇದರಲ್ಲಿ ನನ್ನ, ಜಗ್ಗೇಶ್, ಧನಂಜಯ ಹಾಗೂ ಸುಮನ್ ರಂಗನಾಥ್ ಅವರ ಪಾತ್ರ ಪ್ರೇಕ್ಷಕನಿಗೆ ಹೊಸ ರೀತಿಯ ಅನುಭವವನ್ನು ನೀಡುತ್ತವೆ” ಎಂಬುದು ಅದಿತಿ ಪ್ರಭುದೇವ ಅವರ ಅಭಿಪ್ರಾಯ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ