ಮಹೇಶ್ ಚಿನ್ಮಯ್ ನಿರ್ದೇಶನದ “ವಸುಂಧರಾದೇವಿ” ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮಹಿಳಾಪ್ರಧಾನವಾಗಿರುವ ಈ ಸಿನಿಮಾದಲ್ಲಿ ನಟಿ ಸೋನು ಗೌಡ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಸಿನಿಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನು ಉಣಬಡಿಸಲು ಬರುತ್ತಿದ್ದಾರೆ ಸೋನು ಗೌಡ.

ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಸೋನು ಗೌಡ ” ವಸುಂಧರಾದೇವಿಯಲ್ಲಿ ನಾನು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾದ ಹೆಸರೇ ಸೂಚಿಸುವಂತೆ ಇದೊಂದು ಮಹಿಳಾಪ್ರಧಾನ ಸಿನಿಮಾ ಹೌದು. ಇದರಲ್ಲಿ ನಾನು ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ” ಎಂದು ಹೇಳುತ್ತಾರೆ.

ಇದರ ಜೊತೆಗೆ “ಈ ಸಿನಿಮಾದಲ್ಲಿ ನಾನು ಶಕ್ತಿಯುತ ರಾಜಕಾರಿಣಿಯಾಗಿ ತೆರೆ ಮೇಲೆ ಬರಲಿದ್ದೇನೆ. ಇನ್ನು ಇದರಲ್ಲಿ ನಾನು ಧರ್ಮ ಕೀರ್ತಿರಾಜ್ ಅವರೊಂದಿಗೆ ನಟಿಸಲಿದ್ದು ಇದು ಎರಡನೇ ಬಾರಿಗೆ ನಾನು ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದೇನೆ” ಎಂದು ಹೇಳುತ್ತಾರೆ ಸೋನು ಗೌಡ.

ಮೇಕಪ್ ಕಲಾವಿದ ರಾಮಕೃಷ್ಣ ಅವರ ಮಗಳಾಗಿರುವ ಸೋನು ಗೌಡ ಇಂತಿ ನಿನ್ನ ಪ್ರೀತಿಯ ಸಿನಿಮಾದ ನಮನ ಆಗಿ ನಟನೆಗೆ ಕಾಲಿಟ್ಟರು. ಮುಂದೆ ಪರಮೇಶಿ ಪಾನ್ ವಾಲ, ಗುಲಾಮ, ರಾಮ್, ಪೊಲೀಸ್ ಕ್ವಾಟರ್ಸ್, ದ್ಯಾವ್ರೇ, ಗೋವಾ, ಕಿರಗೂರಿನ ಗಯ್ಯಾಳಿಗಳು, ಅಸ್ಥಿತ್ವ, ಹ್ಯಾಪಿ ನ್ಯೂ ಇಯರ್, ಮಾರಿಕೊಂಡವರು, ಗುಳ್ಟು, ಕಾನೂರಾಯಣ, ಒಂಥರಾ ಬಣ್ಣಗಳು, ಚಂಬಲ್, ಫಾರ್ಚುನರ್, ಐ ಲವ್ ಯೂ, ಯುವರತ್ನ, ದೃಶ್ಯ 2, ಡಿಯರ್ ವಿಕ್ರಮ್ ಹೀಗೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ.

ಕನ್ನಡದ ಜೊತೆಗೆ ಮಲಯಾಳಂ ಹಾಗೂ ತಮಿಳು ಸಿನಿಕ್ಷೇತ್ರದಲ್ಲಿ ನಟನಾ ಕಂಪನ್ನು ಪಸರಿಸುವ ಸೋನು ಗೌಡ ಕಿರುತೆರೆಯಲ್ಲಿಯೂ ಮೋಡಿ ಮಾಡಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅವರ ಮೊದಲ ಹೆಂಡತಿ ರಾಜನಂದಿನಿಯಾಗಿ ಸೋನು ಗೌಡ ನಟಿಸಿದ್ದರು. ಅದು ಅವರ ಮೊದಲ ಧಾರಾವಾಹಿಯಾಗಿದ್ದರೂ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ