ವಯಸ್ಸಾದ ಮೇಲೆ ಕಾಶಿಗೆ ಹೋಗಬೇಕು ಎನ್ನುವ ಮಾತಿದೆ. ಆದರೆ ನನ್ನ ಪ್ರಕಾರ ಎಲ್ಲರೂ ಒಮ್ಮೆಯಾದರೂ ಯೌವ್ವನದಲ್ಲೇ ಕಾಶಿಯ ಸೌಂದರ್ಯ ನೋಡಬೇಕು. ಏಕೆಂದರೆ ಅದು ಜೀವನವನ್ನು ನೋಡುವ ನಮ್ಮ ದೃಷ್ಟಿಕೋನಕ್ಕೆ ಒಂದು ಹೊಸ ಆಯಾಮ ಕೊಡುತ್ತದೆ” ಎಂದು ಹೇಳುತ್ತಾರೆ ಬನಾರಸ್ ಚಿತ್ರದ ನಟಿ ಸೊನಾಲ್ ಮೊಂಥೆರೋ.

ಚಂದನವನದ ತಾರೆ ಸದ್ಯಕ್ಕೆ ಹಲವಾರು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ತಮ್ಮ ಮೊದಲ ಪಾನ್ ಇಂಡಿಯ ಚಿತ್ರ ‘ಬನಾರಸ್’ ಬಗ್ಗೆ ಮಾತನಾಡಿದ್ದಾರೆ. ಅಂದ ಹಾಗೇ ಬನಾರಸ್ ಸಿನಿಮಾದ ಚಿತ್ರಖರಣ ಸುಮಾರು 40 ದಿನಗಳ ಕಾಲ ಕಾಶಿಯಲ್ಲಿ ನಡೆದಿದ್ದು, ಹೇಗಿದೆ ಏನೆಂಬುದು ಚಿತ್ರ ಬಿಡುಗಡೆಗೊಂಡ ನಂತರವಷ್ಟೇ ತಿಳಿಯಬೇಕಿದೆ.

ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದ ಈ ಚಿತ್ರ ಟ್ರಾವೆಲ್ ಹಾಗೂ ರೊಮಾನ್ಸ್ ಕಥಾಹಂದರವನ್ನೊಳಗೊಂಡಿದೆ. ಇನ್ನು ಸಿನಿಮಾದ ಬಗ್ಗೆ ಮಾತನಾಡಿರುವ ಕುಡ್ಲದ ಕುವರಿ ” ಬನಾರಸ್ ನನ್ನ ಮೊದಲ ಪಾನ್ ಇಂಡಿಯಾ ಚಿತ್ರವಾಗಿದ್ದು ಜಾತಿ ಧರ್ಮವನ್ನು ಮೀರಿದ ಸಂದೇಶವನ್ನೊಳಗೊಂಡಿದೆ. ಈ ಮೂಲಕ ಬೇರೆ ಭಾಷೆಯ ಚಿತ್ರಗಳಲ್ಲಿ ಅವಕಾಶಗಳೂ ಒದಗಿಬರಬಹುದೆಂಬ ಆಶಯ ನನಗಿದೆ” ಎಂದಿದ್ದಾರೆ.

ಇದರ ಜೊತೆಗೆ “ಬನಾರಸ್’ ಚಿತ್ರದ ಪ್ರತಿಯೊಂದು ಶಾಟ್ ಕೂಡ ಒಂದು ಅದ್ಭುತವಾದ ಪೇಂಟಿಂಗ್ ರೀತಿಯಲ್ಲಿ ಕಂಡುಬರುತ್ತದೆ. ನಾನು ಬಹಳಷ್ಟು ಜಾಗಗಳನ್ನು ನೋಡಿದ್ದೇನೆ, ಆದರೆ ಕಾಶಿಯಲ್ಲಿ ಸಿಗುವಂತಹ ಪಾಸಿಟಿವ್ ವೈಬ್ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಅಲ್ಲಿನ ಬಹಳಷ್ಟು ಸಿಹಿ ತಿಂಡಿ ತಿನಿಸುಗಳು ಈಗ ನನ್ನ ಫೇವರೀಟ್. ಕಾಶಿಯ ಬೀಡಾ ಪಾನ್ ಬಹಳ ಫೇಮಸ್. ಚಿತ್ರದ ಪ್ರಮೋಶನ್ ವೇಳೆ ಗಂಗಾರತಿಗೂ ಅವಕಾಶವಾಗಿದ್ದು ನನ್ನ ಅದೃಷ್ಟವೇ ಸರಿ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

“ಚಿತ್ರದಲ್ಲಿ ನಾನು ಒಬ್ಬ ಮುಗ್ಧ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಧನಿ ಎಂದು ಆ ಪಾತ್ರದ ಹೆಸರು. ಝೈದ್ ಖಾನ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ” ಎಂದು ಚಿತ್ರದ ನಾಯಕ ಶಾಸಕ ಜಮೀರ್ ಅಹಮದ್ ಮಗ ಝೈದ್ ಖಾನ್ ಬಗ್ಗೆ ಮಾತನಾಡಿದರು.

ಕೊನೆಯಲ್ಲಿ “ಜಯತೀರ್ಥ ಸರ್ ನಿರ್ದೇಶನದ ಬೆಲ್ ಬಾಟಮ್ ಚಿತ್ರ ನೋಡಿದ ನಂತರ ನನಗೆ ಅವರೊಂದಿಗೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದಕ್ಕೆ ಸರಿಯಾಗಿ ‘ಬನಾರಸ್’ ಚಿತ್ರಕ್ಕೆ ಕರೆ ಬಂದಾಗ ಸಂತೋಷದಿಂದ ಒಪ್ಪಿಕೊಂಡೆ. ಅವರ ಚಿತ್ರಗಳಲ್ಲಿ ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ನಾಯಕಿಯ ಪಾತ್ರಕ್ಕೂ ಇರುತ್ತದೆ ಅದೇ ನನಗೆ ಇಷ್ಟವಾದ ಅಂಶ” ಎಂದರು.

ಬನಾರಸ್ ಅಲ್ಲದೆ ಗರಡಿ, ಮಾದೇವ, ಶುಗರ್ ಫ್ಯಾಕ್ಟರಿ, ತಲ್ವಾರ್ ಪೇಟೇ, ಬುದ್ಧಿವಂತ 2, ಸರೋಜಿನಿ ಇತ್ಯಾದಿ ಚಿತ್ರಗಳಲ್ಲಿ ನಟಿಸುತ್ತಿರುವ ಸೊನಾಲ್ ಮೊಂಥೆರೋ ಸದ್ಯಕ್ಕೆ ಕನ್ನಡದ ಬ್ಯುಸಿ ನಟಿ ಎನ್ನಬಹುದು. “ದೇವರ ಕೃಪೆ ನನ್ನ ಮೇಲೆ ಚೆನ್ನಾಗಿದೆ ಅನ್ನಿಸುತ್ತದೆ. ಒಳ್ಳೊಳ್ಳೆ ಚಿತ್ರಗಳು ನನ್ನ ಪಾಲಿಗೆ ಬರುತ್ತಿವೆ. ಬಂದದ್ದೆಲ್ಲಾ ಬರಲಿ ಅಂತ ನಾನೂ ನನ್ನ ಬೆಸ್ಟನ್ನು ಕೊಡುತ್ತಿದ್ದೇನೆ. ಮುಂದೇನೆಂಬ ಯೋಚನೆ ಇಲ್ಲ, ಜೀವನದ ತುಂಬಾ ಸರ್ಪ್ರೈಸ್ ಗಳಿದ್ದರೆನೇ ಚಂದ ಅಂತ ನಂಬಿದವಳು ನಾನು” ಎಂದು ತಮ್ಮ ವೃತ್ತಿ ಹಾಗೂ ಸಿಗುತ್ತಿರುವ ಅವಕಾಶಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ