ಸುಮಾರು ಏಳು ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಶುಭ್ರ ಅಯ್ಯಪ್ಪ. ಶಿವಣ್ಣನ ನಟನೆಯ ‘ವಜ್ರಕಾಯ’ ಚಿತ್ರದ ನಂತರ ಮತ್ತೆ ಇವರು ಯಾವ ಸಿನಿಮಾಗಳಲ್ಲೂ ನಟಿಸಿರಲಿಲ್ಲ. ಇದೀಗ ಬರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ಎರಡೆರಡು ಸಿನಿಮಾಗಳ ಮೂಲಕ ಎನ್ನುವುದು ಮತ್ತೊಂದು ವಿಶೇಷ ಸಂಗತಿ!

ಹೌದು! ‘ತಿಮ್ಮಯ್ಯ ಆಂಡ್ ತಿಮ್ಮಯ್ಯ’ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಅನಂತ್ ನಾಗ್ ನಾಯಕನ ಅಜ್ಜನಾಗಿ ಬಹುಮುಖ್ಯ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಳು ವರ್ಷಗಳ ನಂತರ ಶುಭ್ರ ಅಯ್ಯಪ್ಪ ನಟಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಸಂಜಯ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವು ಅಜ್ಜ ಮೊಮ್ಮಗನ ಸಂಬಂಧವನ್ನು ಆಧರಿಸಿರುವ ಕಥೆಯಿದೆ. ಅನಂತ್ ನಾಗ್ ಅಜ್ಜನ ಪಾತ್ರದಲ್ಲಿ, ದಿಗಂತ್ ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಐಂದ್ರಿತಾ ರೈ ಮಾಡಿದರೆ, ಮತ್ತೊಂದು ಪಾತ್ರವನ್ನು ಶುಭ್ರಾ ಅಯ್ಯಪ್ಪ ನಿರ್ವಹಿಸುತ್ತಿದ್ದಾರೆ.

ಮೊದಲೇ ಹೇಳಿದಂತೆ ಇದೊಂದು ಅಜ್ಜ ಮೊಮ್ಮಗನ ನಡುವಿನ ಕಥೆಯಾಗಿದ್ದು, ಮೂವತ್ತು ವರ್ಷಗಳ ಕಾಲ ಇಬ್ಬರೂ ಪರಸ್ಪರ ಭೇಟಿ ಮಾಡಿರುವುದಿಲ್ಲ. ಯಾವುದೋ ಒಂದು ಘಟನೆಯಿಂದ ಇಬ್ಬರೂ ಮೂರು ತಿಂಗಳ ಕಾಲ ಒಟ್ಟಿಗೆ ಇರುವಂತಹ ಸನ್ನಿವೇಶ ಎದುರಾಗುತ್ತದೆ. ಆ ಮೂರು ತಿಂಗಳು ಅವರಿಬ್ಬರು ಹೇಗೆ ಕಳೆಯುತ್ತಾರೆ ಎನ್ನುವುದೇ ಸಿನಿಮಾದ ಕಥಾಹಂದರ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಮಿಮಿಕ್ರಿ ಗೋಪಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಲಿದ್ದಾರೆ. ಈ ಮೊದಲೂ ಅನಂತ್ ನಾಗ್ ಹಾಗೂ ದಿಗಂತ್ ಅವರ ಜೋಡಿ ಹಿಟ್ ಆಗಿರುವುದನ್ನು ನೋಡಿರುವ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹಾಗೂ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ