ನಟನೆ ನಿರ್ಮಾಣವಷ್ಟೇ ಅಲ್ಲದೆ ಇದೀಗ ನಿರ್ದೇಶನಕ್ಕೂ ಜೈ ಅಂದಿದ್ದಾರೆ ನಟಿ ಶೃತಿ ಹರಿಹರನ್. ಹೌದು! ‘ರಾಟೆ’, ‘ಬ್ಯೂಟಿಫುಲ್ ಮನಸ್ಸುಗಳು’, ‘ನಾತಿಚರಾಮಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ನಟಿ ಶೃತಿ ಹರಿಹರನ್.

ತಮ್ಮ ಸಹಜ ಅಭಿನಯದ ಮೂಲಕವೇ ಜನಮನ ಗೆದ್ದ ಚೆಲುವೆ ಈಕೆ. ಇತ್ತೀಚಿನ ದಿನಗಳಲ್ಲಿ ಮದುವೆ, ಮಗು ಎಂದು ಸಿನಿರಂಗದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಸಿನಿರಂಗಕ್ಕೆ ವಾಪಾಸಾಗಿದ್ದು ಒಂದೆಡೆಯಾದರೆ ಒಂದು ವಿಡಿಯೋ ಆಲ್ಬಂ ಅನ್ನು ನಿರ್ದೇಶನ ಕೂಡ ಮಾಡಿದ್ದಾರೆ.

ಈ ಮೊದಲು ತಮ್ಮದೇ ಆದ ಒಂದು ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದ ಇವರು ಇದೀಗ ನಿರ್ದೇಶನವನ್ನು ಮಾಡುವ ಮೂಲಕ ಎಲ್ಲಕ್ಕೂ ಸೈ ಎಂದೆನಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ” ನನಗೆ ಮೊದಲಿನಿಂದಲೂ ನಿರ್ದೇಶನ ಮತ್ತು ಬರವಣಿಗೆಯ ಬಗ್ಗೆ ಬಹಳ ಆಸಕ್ತಿ ಇತ್ತು. ಆದರೆ ಅವಕಾಶವಾಗಿರಲಿಲ್ಲ. ನನ್ನ ಕಾಲೇಜಿನ ಜೂನಿಯರ್ ವಿನೀತ್ ವಿನ್ಸೆಂಟ್ ಎಂಬುವವರು ಒಮ್ಮೆ ವಿಡಿಯೋ ಆಲ್ಬಂ ಮಾಡುವ ಐಡಿಯಾ ಕೊಟ್ಟರು. ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಅದ್ಭುತ ಸಂಗೀತಗಾರ. ಅವರ ವಿಡಿಯೋ ಆಲ್ಬಂ ಒಂದನ್ನು ನಾನು ನಿರ್ದೇಶಿಸಿದ್ದೇನೆ. ಇದು ಫುಟ್‌ಬಾಲ್ ಕುರಿತಾದ ಇಂಗ್ಲಿಷ್ ಹಾಡು’ ಎಂದರು.

“ನಾನೀಗ ನಿರ್ದೇಶಿಸಿರುವ ವಿಡಿಯೊ ಆಲ್ಬಂನ ಹೆಸರು ‘ಲೆಟ್ ಇಟ್ ಫ್ಲೈ’. ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸದನ್ನು ಮಾಡುವ ತುಡಿತ ಹೆಚ್ಚಾಗುತ್ತಲೇ ಇದೆ. ಹಾಗಾಗಿ ನಾನು ನಿರ್ದೇಶನ ಮತ್ತು ಬರವಣಿಗೆ ಎರಡರಲ್ಲೂ ನನ್ನನ್ನು ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ಜೊತೆಗೆ ಒಂದು ಕಿರುಚಿತ್ರವನ್ನೂ ನಿರ್ದೇಶಿಸುವ ತಯಾರಿ ನಡೆಯುತ್ತಿದೆ” ಎಂದರು.

“ಜಾತಿ,ಧರ್ಮ, ಜಾಗ, ದೇಶ ಹೀಗೆ ಬೇರೆ ಬೇರೆಯಾಗಿ ಬದುಕುವ ನಾವು ಒಂದು ಹಾಡು ಕೇಳುವಾಗ ಹಾಗು ಆಟವಾಡುವಾಗ ಒಂದೇ ಆಗುತ್ತೇವೆ. ಇದೇ ಈ ನಮ್ಮ ಹಾಡಿನ ಕಾನ್ಸೆಪ್ಟ್. ಇದನ್ನು ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಫುಟ್ಬಾಲ್ ಗೀತೆಯನ್ನಾಗಿ ಬಳಸುತ್ತೇವೆ. ಈ ಹಾಡಿನಲ್ಲಿ ಬೇರೆ ಬೇರೆ ಊರುಗಳ ಫುಟ್ಬಾಲ್ ಆಟಗಾರರು ಬಂದು ಹೋಗುತ್ತಾರೆ. ಇದರ ನಿರ್ದೇಶನ ಮಾಡಲು ನಾನು ಸಾಕಷ್ಟು ಹೋಮ್‌ವರ್ಕ್ ಮಾಡಿಕೊಂಡಿದ್ದೆ. ಹಲವಾರು ಸ್ಕ್ರೀನ್ ರೈಟಿಂಗ್ ವಿಡಿಯೋಗಳನ್ನು ನೋಡಲು ಆರಂಭಿಸಿದೆ. ಆನ್‌ಲೈನ್‌ನಲ್ಲಿ ಸಣ್ಣ ಕೋರ್ಸ್ ಕೂಡಾ ಮಾಡಿದೆ. ಅವೆಲ್ಲವೂ ನನಗೆ ಈ ಹಾಡನ್ನು ನಿರ್ದೇಶಿಸಲು ಸಹಕಾರಿಯಾದವು. ಇದು ಮೂರು ನಿಮಿಷಗಳ ವಿಡಿಯೊ” ಎಂದು ವಿವರಿಸಿದ್ದಾರೆ ಶ್ರುತಿ ಹರಿಹರನ್.