ಆರ್. ಚಂದ್ರು ನಿರ್ದೇಶನದ, ಉಪೇಂದ್ರ ನಾಯಕನಾಗಿರುವ, ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ಕಬ್ಬ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಎರಡು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರೆಗೆ ನಾಯಕಿಯಾಗಿ ಶ್ರಿಯಾ ಶರಣ್ ನಟಿಸಿದ್ದಾರೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಪಾತ್ರದ ಬಗ್ಗೆ, ಚಿತ್ರೀಕರಣದ ಅನುಭವದ ಕುರಿತು ಹಾಗೂ ವಿಶೇಷವಾಗಿ ತಾಯ್ತನ ಸೇರಿದಂತೆ ಮುದ್ದು ಮಗಳು ರಾಧಾ ಕುರಿತೂ ಮಾತನಾಡಿದ್ದಾರೆ.

‘ಯಾವುದೇ ಪಾತ್ರ ಆಯ್ಕೆ ಮಾಡಿಕೊಳ್ಳುವ ಮುನ್ನ ಅದರ ಬಗ್ಗೆ ಹೆಚ್ಚು ಮಾಹಿತಿ ಪಡೆಯುತ್ತೇನೆ. ‘ಕಬ್ಬ’ ಚಿತ್ರದಲ್ಲಿ ನನ್ನ ಪಾತ್ರವನ್ನು ನಿರ್ದೇಶಕ ಚಂದ್ರು ಚೆನ್ನಾಗಿ ಡಿಸೈನ್ ಮಾಡಿದ್ದಾರೆ. ನನಗೂ ಪಾತ್ರಕ್ಕೂ ಹಲವು ಸಾಮ್ಯತೆಗಳಿವೆ. ಹೀಗಾಗಿಯೇ ನನಗೆ ಹತ್ತಿರವಾದ ಪಾತ್ರವಿದು. ‘ಕಬ್ಬ’ ನನ್ನ ಕರಿಯರ್‌ನ ಅತಿ ದೊಡ್ಡ ಸಿನಿಮಾ. ಜನರಿಗೆ ನಮ್ಮ ಚಿತ್ರ ಇಷ್ಟವಾಗುವ ಭರವಸೆಯಿದೆ’ ಎಂದು ಪಾತ್ರದ ಬಗ್ಗೆ ಹೇಳಿದರು.

ಇನ್ನು ಸದ್ಯದ ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗಗಳ ಬಗ್ಗೆ ಮಾತನಾಡುತ್ತಾ, ‘ಉತ್ತರ, ದಕ್ಷಿಣವೆಂದು ನಾನು ಬೇರ್ಪಡಿಸುವುದಿಲ್ಲ. ಸ್ಯಾಂಡಲ್‌ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಅಂತ ಈಗ ಪ್ರತ್ಯೇಕವಿಲ್ಲ. ಎಲ್ಲವೂ ಸೇರಿ ಇಂಡಿಯನ್ ಸಿನಿಮಾ ಆಗಿದೆ. ರಾಜಸ್ತಾನದಲ್ಲಿರುವವರು ತಮಿಳು ಚಿತ್ರ ನೋಡಿ ಇಷ್ಟಪಡುತ್ತಾರೆ. ಬಂಗಾಲಿಗಳು ಮಲಯಾಳಂ ಚಿತ್ರಗಳನ್ನು ನೋಡಬಹುದು. ಹೀಗೆ ಎಲ್ಲರೂ ಎಲ್ಲಾ ಭಾಷೆಗಳ ಚಿತ್ರಗಳನ್ನೂ ನೋಡಬಹುದು’ ಎಂದರು.

ಕೊರೊನಾ ಲಾಕ್‌ಡೌನ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಶ್ರಿಯಾ, ಅದಾಗಿ ಕೆಲವೇ ತಿಂಗಳಲ್ಲಿ ಶೂಟಿಂಗ್ ಸೆಟ್‌ಗೆ ಮರಳಿದ್ದರು. ‘ನಾನು ಮತ್ತೆ ಸಿನಿಮಾಗಳಿಗೆ ವಾಪಸ್ಸಾಗಲು ಕಾಯುತ್ತಿದ್ದೆ. ತೆಲುಗು ಚಿತ್ರರಂಗದ ದಿಗ್ಗಜ ನಾಗೇಶ್ವರ ರಾವ್, ವಿಧಿವಶರಾಗುವ ಕೆಲವೇ ದಿನಕ್ಕೆ ಮುಂಚೆ ಅವರ ಜತೆ ನಾನು ಕೆಲಸ ಮಾಡುತ್ತಿದ್ದೆ. ಆಗ ಅವರು, ನಾನು ಆಸ್ಪತ್ರೆಯ ಬೆಡ್‌ಗಿಂತ ಶೂಟಿಂಗ್ ಸೆಟ್‌ನಲ್ಲಿ ಸಾಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದ ಮಾತನ್ನು ನಾನೆಂದೂ ಮರೆಯುವುದಿಲ್ಲ. ನಾನು ಸಿನಿಮಾವನ್ನು ಪ್ರೀತಿಸುತ್ತೇನೆ” ಎಂದಿದ್ದಾರೆ.

“ರಾಧಾ ನನಗೆ ಸಿಕ್ಕಿರುವ ಇದುವರೆಗಿನ ಅತ್ಯಮೂಲ್ಯ ಉಡುಗೊರೆ. ಆಕೆ ನನ್ನ ಜೀವನಕ್ಕೆ ಬಂದಿರುವುದಕ್ಕೆ ದೇವರಿಗೆ ಧನ್ಯವಾದ. ಆಕೆಯ ಜತೆಗೆ ಇನ್ನೂ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ. ರಾಧಾ ಹುಟ್ಟಿದ ಎಂಟು ತಿಂಗಳಲ್ಲಿ ಶೂಟಿಂಗ್ ಸೆಟ್‌ಗೆ ಮರಳಿದ್ದೆ. ನನ್ನ ಸಿನೆಮಾಗಳನ್ನು ನೋಡಿ ರಾಧಾ ಹೆಮ್ಮೆಪಡಬೇಕು, ಖುಷಿಪಡಬೇಕು ಎಂಬ ಆಸೆ. ಆಕೆಗೆ ನನ್ನ ಕೆಲಸದ ಬಗ್ಗೆ ಅರಿವಾಗಬೇಕು ಅಂತಲೇ ರಾಧಾಳನ್ನೂ ಕೆಲವು ಬಾರಿ ನಾನು ಶೂಟಿಂಗ್ ಸೆಟ್‌ಗೆ ಕರೆತಂದಿದ್ದೆ. ಚಂದ್ರು ಮತ್ತವರ ಪತ್ನಿ ಯಮುನಾ ನನ್ನ ಮಗಳಿಗೆ ಪ್ರತಿ ಬಾರಿ ಬಂದಾಗಲೂ ಟೆಡ್ಡಿ ಬೇರ್, ಬೊಂಬೆಗಳನ್ನು ಕೊಡಿಸುತ್ತಿದ್ದರು. ತುಂಬ ಆಪ್ತವಾಗಿ ನೋಡಿಕೊಂಡರು’ ಎಂದರು.

ಅಲ್ಲದೆ ಮೊದಲ ಚಿತ್ರ ‘ಇಷ್ಟಂ’ ಚಿತ್ರೀಕರಣಕ್ಕೆ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದನ್ನು ನೆನಪಿಸಿಕೊಂಡರು. ‘ಆ ಬಳಿಕ ಬೆಂಗಳೂರಿಗೆ ಆಗೊಮ್ಮೆ ಈಗೊಮ್ಮೆ ಬರುತ್ತಿರುತ್ತೇನೆ. ಇಲ್ಲಿನ ಜನ, ವಾತಾವರಣ, ಆಹಾರ ಅಂದರೆ ಇಷ್ಟ. ಅದರಲ್ಲೂ ಇಲ್ಲಿನ ಮಸಾಲೆ ದೋಸೆ ತುಂಬಾ ಅಚ್ಚುಮೆಚ್ಚು. ಮೈಸೂರು ಕೂಡ ನನಗಿಷ್ಟದ ಜಾಗ’ ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ