ಇದೀಗ ದೇಶದೆಲ್ಲೆಡೆ ಭಾರೀ ಸಂಚಲನ ಮೂಡಿಸುತ್ತಿರುವ ಕನ್ನಡ ಸಿನಿಮಾ ‘ಕಾಂತಾರ’ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯವಾಗುತ್ತಲೇ ಇದೆ. ರಿಷಭ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ಕಲಾವಿದರೂ ತಮ್ಮ ಅಭಿನಯದ ಮೂಲಕ ಬಹಳಷ್ಟು ಪ್ರಶಂಸೆ ಹಾಗೂ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸಿನಿಮಾದ ನಾಯಕಿ ‘ಲೀಲಾ’ ಪಾತ್ರದಲ್ಲಿ ಮಿಂಚಿರುವ ಸಪ್ತಮಿ ಗೌಡ ಅವರಿಗಂತೂ ಬಹಳಾ ಬೇಡಿಕೆ ಸೃಷ್ಟಿಯಾಗಿದೆ. ಈ ಖ್ಯಾತಿ ಹಾಗೂ ಬೇಡಿಕೆಗೆ ಸ್ಪಂದಿಸಿರುವ ಅವರು ತಡವಾದರೂ ಸರಿ ಒಳ್ಳೆಯ ಪಾತ್ರಗಳನ್ನಷ್ಟೇ ಆಯ್ಕೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.

ಸದ್ಯ ಚಿತ್ರದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುವ ಸಪ್ತಮಿ ಗೌಡ “ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಇವತ್ತು ಕಾಂತರ ಸಿನಿಮಾ ಈ ಮಟ್ಟದಲ್ಲಿ ವಿಶ್ವದಾದ್ಯಂತ ಯಶಸ್ವಿಯಾಗಿರುವುದಕ್ಕೆ ಕಾರಣ ನೀವೇ. ಕಾಂತರ ಸಿನಿಮಾವನ್ನು ಅಪ್ಪಿಕೊಂಡು ಗೆಲ್ಲಿಸುತ್ತಿರುವುದಕ್ಕೆ ಋಣಿಯಾಗಿದ್ದೇನೆ. ನನ್ನ ಪಾತ್ರ ‘ಲೀಲಾ’ಳಿಗೆ ತೋರಿಸುತ್ತಿರುವ ನಿಮ್ಮ ಪ್ರೀತಿಯಿಂದ ಹೃದಯ ತುಂಬಿದೆ. ಈ ಪ್ರೀತಿಗೆ ನಾನು ಸದಾ ಚಿರಋಣಿ” ಎಂದು ಈ ಹಿಂದೆ ತಮ್ಮ ಇನ್ ಸ್ಟಾಗ್ರಾಂಲ್ಲಿ ಬರೆದುಕೊಂಡಿದ್ದರು.

ಇದರ ಜೊತೆಗೆ “ನಾನಿಂದು ಲೀಲಾ ಆಗಿ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಪ್ರೊಡಕ್ಷನ್ ಹೌಸ್ ಹಾಗೂ ನಿರ್ದೇಶಕರು ಕಾರಣ. ಅವರಿಗೆ ನಾನು ಸದಾ ಋಣಿಯಾಗಿದ್ದೇನೆ. ಅವರ ಬೆಂಬಲ ಹಾಗೂ ಪ್ರೋತ್ಸಾಹದಿಂದಲೇ ನಾನು ಲೀಲಾ ಆಗಿ ಬದಲಾಗಲು ಸಾಧ್ಯವಾಯಿತು. ಕೇವಲ ಕನ್ನಡವಷ್ಟೇ ಅಲ್ಲದೆ ಬೇರೆ ರಾಜ್ಯದ ಜನರ ಮನಸ್ಸನ್ನು ಗೆಲ್ಲಲು ನನಗೆ ಸಾಧ್ಯವಾಗಿದೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸಪ್ತಮಿ ಗೌಡ.

ಕೊನೆಯಲ್ಲಿ ” ಕಾಂತಾರದ ಪ್ರಚಾರಕ್ಕಾಗಿ ರಿಷಭ್ ಶೆಟ್ಟಿಯವರು ಹಲವು ಕಡೆಗಳಿಗೆ ಹೋಗುತ್ತಿದ್ದಾರೆ. ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೂ ಸಿಗುತ್ತಿದೆ. ತುಂಬಾ ಸಂತಸವಾಗುತ್ತಿದೆ. ಕಾಂತಾರ ಸಿನಿಮಾ ಹಾಗೂ ಲೀಲಾ ಪಾತ್ರದಿಂದ ನನಗೆ ಸಿಗುತ್ತಿರುವ ಜನಪ್ರಿಯತೆ ಮತ್ತು ಅಭಿಮಾನ ನನ್ನನ್ನು ಬಹಳಷ್ಟು ದೂರಕ್ಕೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ನನಗಿದೆ” ಎನ್ನುತ್ತಾರೆ ಸಪ್ತಮಿ ಗೌಡ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ