ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಮಣಿಗಳು ಧಾರಾವಾಹಿಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹೌದು, ನಾಯಕಿ ದೃಷ್ಟಿಯಾಗಿ ಅಭಿನಯಿಸುತ್ತಿದ್ದ ಸಮೀಕ್ಷಾ ಅವರು ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದಾರೆ. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದ ಸಮೀಕ್ಷಾ ಇದ್ದಕ್ಕಿದ್ದಂತೆ ಹೊರಬಂದಿರುವುದು ಧಾರಾವಾಹಿ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೀನಾಕ್ಷಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಸಮೀಕ್ಷಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕೇವಲ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಈಕೆ ನಟಿಸಿದ್ದರೂ ಮುದ್ದಾದ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಅಭಿನಯಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಸಮೀಕ್ಷಾ ನಂತರ ಬದಲಾದುದು ಶನಾಯ ಆಗಿ! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಬ್ಬರಿಸಿದರು. ಮೊದಲ ಬಾರಿಗೆ ಖಡಕ್ ವಿಲನ್ ಆಗಿ ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಮೀಕ್ಷಾ ಮುಂದೆ ಕಾಣಿಸಿದ್ದು ದ್ವಿಪಾತ್ರದಲ್ಲಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೂರುಗಂಟು ಧಾರಾವಾಹಿಯಲ್ಲಿ ಶ್ರಾವಣಿ ಮತ್ತು ಪಾವನಿ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಮೀಕ್ಷಾ ಒಂದೇ ಧಾರಾವಾಹಿಯಲ್ಲಿ ಶಾಂತ ಮಾತ್ರವಲ್ಲದೇ ರಗಡ್ ಅವತಾರದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದ ಪ್ರತಿಭಾವಂತೆ. ನಂತರ ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿ ಸಂಜನಾ ಎನ್ನುವ ಪಾತ್ರದಲ್ಲಿ ನಟಿಸಿ ಮಾಯವಾದ ಈಕೆ ದೃಷ್ಟಿಯಾಗಿ ಕಿರುತೆರೆಗೆ ಮರಳಿದ್ದರು. ಈಗ ಆ ಪಾತ್ರಕ್ಕೂ ಅವರು ವಿದಾಯ ಹೇಳಿದ್ದು ಮತ್ತೆ ಕಿರುತೆರೆಗೆ ಹೊಸ ಪ್ರಾಜೆಕ್ಟ್ ಮೂಲಕ ಬರುತ್ತಾರಾ ಎಂದು ಕಾದುನೋಡಬೇಕಾಗಿದೆ.

ಅಂದ ಹಾಗೇ ಸಮೀಕ್ಷಾ ಅವರ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ, ಬದಲಿಗೆ ಹಿರಿತೆರೆಯಲ್ಲಿಯೂ ಆಕೆ ಮೋಡಿ ಮಾಡಿದ್ದಾರೆ. ದಿ ಟೆರರಿಸ್ಟ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಈಕೆ ಅದರಲ್ಲಿ ನಾಯಕಿ ರಾಗಿಣಿ ದ್ವಿವೇದಿ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು. ಮುಂದೆ 96 ಸಿನಿಮಾದಲ್ಲಿ ಜೂನಿಯರ್ ಜಾನು ಪಾತ್ರದಲ್ಲಿಯೂ ಅಭಿನಯಿಸಿದ್ದ ಈಕೆ ದರ್ಶಿತ್ ಭಟ್ ನಿರ್ದೇಶನದ ಫ್ಯಾನ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ನೀರೆ ಸಿನಿಮಾದಲ್ಲೂ ನಾಯಕಿಯಾಗಿ ಬಣ್ಣ ಹಚ್ಚಿರುವ ಇವರು ವಸಿಷ್ಟ ಸಿಂಹ ಮುಖ್ಯ ಭೂಮಿಕೆಯಲ್ಲಿರುವ ಲವ್ ಲಿ ಸಿನಿಮಾದಲ್ಲಿಯೂ ನಾಯಕಿಯಾಗಿ ಮಿಂಚಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ