“ಏಕ್ ಲವ್ ಯಾ” ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರೀಷ್ಮಾ ನಾಣಯ್ಯ ಇದೀಗ “ರಾಣ” ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಇವರು “ಚಿತ್ರದಲ್ಲಿ ನಾನು ಪ್ರಿಯಾ ಎಂಬ ಪಾತ್ರವನ್ನು ಮಾಡಲಿದ್ದೇನೆ. ಯಾವುದೇ ತಲೆಬಿಸಿ ಯೋಚನೆಗಳಿಲ್ಲದೆ ಬೊಂಬಾಟಾಗಿ ಜೀವನ ಸಾಗಿಸುವ ಹುಡುಗಿಯ ಪಾತ್ರವದು. ಸಾಮಾನ್ಯವಾಗಿ ಹೆಚ್ಚಿನ ಚಿತ್ರಗಳಲ್ಲಿ ಕಥೆ ಶುರುವಾದ ಮೇಲೆ ಪ್ರೀತಿ ಹುಟ್ಟುತ್ತದೆ, ಈ ಚಿತ್ರದಲ್ಲಿ ನಾವು ಪ್ರೇಮಿಗಳಾಗಿಯೇ ಪ್ರೇಕ್ಷಕರಿಗೆ ಕಾಣಿಸಿಕೊಳ್ಳಲಿದ್ದೇವೆ. ಪ್ರೀತಿಸುವುದು ಎಷ್ಟು ಮುಖ್ಯವೋ ಹಾಗೆಯೇ ಬೆಳೆದ ಸಂಬಂಧವನ್ನು ಕಾಪಿಟ್ಟುಕೊಳ್ಳುವುದು ಅಷ್ಟೇ ಮುಖ್ಯ ಎಂಬುದು ಈ ಚಿತ್ರದ ಪ್ಲಾಟ್ ಆಗಿದೆ.” ಎಂದರು.

ಹಾಗೆಯೇ ಚಿತ್ರ ತಂಡದ ಬಗ್ಗೆಯೂ ಮಾತನಾಡಿದ ಅವರು “ಮೊದಲು ಮಂಜು ಸರ್ ಈ ಚಿತ್ರದ ಬಗ್ಗೆ ಮಾತನಾಡಿದಾಗ ನನಗೆ ಬಹಳ ಖುಷಿಯಾಯಿತು. 48 ಚಿತ್ರಗಳನ್ನು ಮಾಡಿರುವ ಅನುಭವ ಖ್ಯಾತಿ ಅವರಿಗಿದೆ. ಹಾಗಾಗಿ ಸಂತೋಷದಿಂದ ಒಪ್ಪಿಕೊಂಡೆ. ನಂದ ಕಿಶೋರ್ ಸರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿರುವ ಸ್ಟೈಲ್ ನನಗೆ ತುಂಬಾ ಇಷ್ಟವಾಯಿತು” ಎಂದರು.

ಇದರ ಜೊತೆಗೆ “ಚಿತ್ರದ ಟ್ರೈಲರ್ ಆಕ್ಷನ್ ಮೂವಿ ವೈಬ್ಸ್ ಕೊಟ್ಟರೂ ಇಡೀ ಚಿತ್ರದಲ್ಲಿ ಲವ್ ಎಮೋಷನ್ಸ್ ಕಾಮಿಡಿ ಸಿಕ್ಕಾಪಟ್ಟೆ ಇದೆ. ಇದೊಂದು ರೀತಿ ಮನೋರಂಜನೆಯ ಪ್ಯಾಕೇಜ್ ಎಂದೇ ಹೇಳಬಹುದು. ಇನ್ನು ನಂದ ಸರ್ ಬಗ್ಗೆ ಹೇಳುವುದಾದರೆ, ಅವರಿಗೆ ಚಿತ್ರದ ಬಗ್ಗೆ ಇರುವ ಕ್ಲಾರಿಟಿ ವಿಷನ್ ಹಾಗೂ ಅವರ ಫ್ರೆಂಡ್ಲಿ ಅಪ್ರೋಚ್ ನನಗೆ ಬಹಳ ಹಿಡಿಸಿತು” ಎನ್ನುತ್ತಾರೆ ರೀಷ್ಮಾ ನಾಣಯ್ಯ.

ಹಾಗೆಯೇ ಇವರ ಸಹನಟ ಚಿತ್ರದ ನಾಯಕ ಶ್ರೇಯಸ್ ಮಂಜು ಅವರ ಬಗ್ಗೆ ಮಾತನಾಡುತ್ತಾ “ನಮ್ಮ ನಡುವೆ ಒಂದು ಆರೋಗ್ಯಕರ ಕಾಂಪಿಟೇಶನ್ ಇತ್ತು. ಚಿತ್ರದಲ್ಲಿ ಶ್ರೇಯಸ್ ಅವರ ಸೋಲೋ ಡಾನ್ಸ್ ಕೂಡ ಇದೆ. ಈ ಮೊದಲು ನಾನು ಅವರ ಪಡ್ಡೆ ಹುಲಿ ಚಿತ್ರವನ್ನು ನೋಡಿದ್ದೆ. ಈಗ ಅವರ ಜೊತೆ ಕೆಲಸ ಮಾಡುತ್ತಿರುವುದು ಬಹಳ ಖುಷಿ ತಂದಿದೆ” ಎಂದರು.

“ಚಿತ್ರದ ಟ್ರೈಲರ್ ಗೆ ಈಗಾಗಲೇ ನಮಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರದಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ನಾನು ನನ್ನ ಹಂಡ್ರೆಡ್ ಪರ್ಸೆಂಟ್ ಕೊಟ್ಟಿದ್ದೇನೆ. ಇನ್ನು ಪ್ರೇಕ್ಷಕರ ನಿಲುವಿಗೆ ಬಿಟ್ಟಿದ್ದು” ಎಂದು ತಮ್ಮ ಅನುಭವ ಹಂಚಿಕೊಂಡರು ನಟಿ ರೀಷ್ಮಾ ನಾಣಯ್ಯ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ