“ಮೊದಲಿನಿಂದಲೂ ಅದನ್ನು ಇಗ್ನೋರ್ ಮಾಡುವುದಕ್ಕೆ ನನಗೆ ಹೇಳಿದರು. ಅದೆಷ್ಟೇ ಕಡೆಗಣಿಸಿದರೂ ದಿನದಿಂದ ದಿನಕ್ಕೆ ಹೆಚ್ಚೇ ಆಗುತ್ತಿದೆ. ತಮ್ಮ ಅಭಿಪ್ರಾಯಗಳಿಂದ ನನ್ನನ್ನು ಬದಲಾಯಿಸುವುದಕ್ಕೆ ಯಾರು ಕೂಡ ಪ್ರಯತ್ನ ಮಾಡುವ ಅವಶ್ಯಕತೆ ಇಲ್ಲ. ಇವತ್ತು ಇದರ ಬಗ್ಗೆ ಮಾತನಾಡುವುದರ ಮೂಲಕ ನಾನು ಯಾರನ್ನು ಗೆಲ್ಲೋಕೆ ಹೊರಟಿಲ್ಲ ಕೂಡ” ಎಂದು ಸತತವಾಗಿ ಅವರನ್ನೇ ಗುರಿ ಮಾಡುವ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದಾಗಿನಿಂದಲೂ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಟ್ರೋಲ್ ಗಳಿಗೆ ಗುರಿಯಾಗುತ್ತಲೇ ಇದ್ದಾರೆ. ಈ ಬಗ್ಗೆ ಮೊದಲೂ ಹಲವು ಬಾರಿ ಅವರು ಮಾತನಾಡಿದ್ದು, ಮತ್ತೊಮ್ಮೆ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಿದ್ದಾರೆ.

ಹೌದು ಸಿನಿ ರಂಗದಲ್ಲಿ ಈ ಆರು ವರ್ಷಗಳು ರಶ್ಮಿಕಾ ಮಂದಣ್ಣರಿಗೆ ಹೇಳಿದಷ್ಟು ಸುಲಭವಿರಲಿಲ್ಲ. ಸತತವಾಗಿ ಟ್ರೋಲ್ ಗಳಿಗೆ ಗುರಿಯಾಗುತ್ತಲೇ ಇರುತ್ತಾರೆ ಈಕೆ. ನ್ಯಾಷನಲ್ ಕ್ರಶ್ ಎಂಬ ಬಿರುದಿನಿಂದ ಹಿಡಿದು 2019ರಲ್ಲಿ ಅವರ ಕಾಲೇಜಿನ ಫೋಟೋಗಳನ್ನು ಬಳಸಿ ಟ್ರೋಲ್ ಮಾಡಲಾಗಿತ್ತು. ಆ ಬಗ್ಗೆ ಅಂದೇ ಖಡಕ್ಕಾಗಿ ಉತ್ತರಿಸಿದ್ದ ರಶ್ಮಿಕಾ, “ಟ್ರೋಲ್ ಮಾಡುವವರಿಗೆ ಚಿತ್ರರಂಗದ ನಟರು ಬಹಳ ಸುಲಭವಾಗಿ ದಕ್ಕುತ್ತಾರೆ, ಆದರೆ ನಮಗೆ ಯಾರಿಗೂ ಇದರ ಭಾಗಿಯಾಗಿ ಇರಲು ಆಸಕ್ತಿ ಇಲ್ಲ” ಎಂದಿದ್ದರು.

ಈಗ ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಬಗ್ಗೆ ಏನು ಮಾತನಾಡಲಿಲ್ಲ ಎಂಬ ಕಾರಣಕ್ಕಾಗಿ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಈ ಬಗ್ಗೆ ನವೆಂಬರ್ 8ರಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು “ಬಹಳಷ್ಟು ದಿನಗಳಿಂದ ತಿಂಗಳುಗಳಿಂದ ಅಥವಾ ವರ್ಷಗಳಿಂದ ನನ್ನನ್ನು ಕಾಡುತ್ತಿರುವ ಕೆಲವು ವಿಷಯಗಳನ್ನು ಇವತ್ತು ಸ್ಪಷ್ಟ ಪಡಿಸಲಿದ್ದೇನೆ. ಇದನ್ನು ನಾನು ಮೊದಲೇ ಮಾಡಬೇಕಿತ್ತು. ಹಲವಷ್ಟು ಜನರ ಪ್ರೀತಿ ಅಭಿಮಾನದಿಂದಲೇ ನಾನು ಈ ಕ್ಷೇತ್ರದಲ್ಲಿ ಇಷ್ಟು ಮುಂದೆ ಬರಲು ಸಾಧ್ಯವಾಗಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ಹೀಗೆ ಸದಾ ನನ್ನ ಮೇಲೆ ವಿಶ್ವಾಸವನ್ನಿಡಿ. ಅದೇ ನನಗೆ ಈ ಕ್ಷೇತ್ರದಲ್ಲಿ ಮುಂದುವರಿಯಲು ದೊಡ್ಡ ಸ್ಪೂರ್ತಿ. ನಿಮ್ಮನ್ನೆಲ್ಲ ಸಂತೋಷವಾಗಿ ಇಡುವುದೇ ನನ್ನ ಸಂತೋಷದ ಗುಟ್ಟು. ವಂದನೆಗಳು” ಎಂದು ಬರೆದುಕೊಳ್ಳುವುದರ ಮೂಲಕ ಟ್ರೋಲ್ ಗಳಿಗೆ ಕ್ಯಾರೆ ಅನ್ನಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ ಈ ನಟಿ ಬಾಲಿವುಡ್ ಚಿತ್ರ “ಮಿಷನ್ ಮಜ್ನು” ಹಾಗೂ ತಮಿಳು ಚಿತ್ರ “ವರಿಸು” ಅಲ್ಲಿ ಬ್ಯುಸಿಯಾಗಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ