ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ದೂದ್ ಪೇಡ ದಿಗಂತ್ ಅಭಿನಯದ “ಎಡಗೈ ಅಪಘಾತಕ್ಕೆ ಕಾರಣ” ಚಿತ್ರದಲ್ಲಿ ನಟಿ ರಾಧಿಕಾ ನಾರಾಯಣ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. ಹೌದು, ಮೊದಲಿನಿಂದಲೂ ಥ್ರಿಲ್ಲರ್ ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವ ನಟಿ ರಾಧಿಕಾ, ಈಗ ಹೊಸ ರೀತಿಯ ಡಾರ್ಕ್ ಕಾಮಿಡಿ ಹೊಂದಿರುವ ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ನಟಿಸಲಿದ್ದಾರೆ.

ಎಡಗೈ ಮುಂದಿರುವ ಜನರು ಎದುರಿಸುವ ಸಮಸ್ಯೆಗಳ ಬಗೆಗಿನ ಚಿತ್ರ ಇದಾಗಿದ್ದು, ಧನು ಹರ್ಷ ಹಾಗೂ ನಿಧಿ ಸುಬ್ಬಯ್ಯ ನಾಯಕ ನಟಿಯರಾಗಿದ್ದಾರೆ. ಇದಕ್ಕೂ ಮೊದಲು ರಂಗಿತರಂಗ, ಯು ಟರ್ನ್, ಕಾಪಿ ತೋಟ ಮುಂತಾದ ಥ್ರಿಲ್ಲರ್ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಅವರು ಈ ಚಿತ್ರದಲ್ಲಿ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಮಾತಾನಾಡಿರುವ ಅವರು “ನನ್ನ ಪಾತ್ರ ಈ ಚಿತ್ರಕ್ಕೆ ಬಹಳಷ್ಟು ಟ್ವಿಸ್ಟ್ ಕೊಡಲಿದೆ, ಈವರೆಗೂ ಮಾಡಿರುವ ಎಲ್ಲಾ ಥ್ರಿಲ್ಲರ್ ಚಿತ್ರಗಳಿಂದ ಇದು ವಿಭಿನ್ನ” ಎಂದು ಹೇಳಿದ್ದಾರೆ.

“ಮೊದಲಿನಿಂದಲೂ ನನಗೆ ದಿಗಂತ್ ಅವರೊಂದಿಗೆ ನಟಿಸಬೇಕೆಂಬ ಆಸೆ ಇತ್ತು, ಅದೀಗ ಪೂರ್ಣಗೊಂಡಿದೆ. ಹೊಸ ಹಾಗೂ ಹಳೆ ಕಲಾವಿದರ ಮಿಶ್ರಣದ ಚಿತ್ರ ಇದು. ಇದರಲ್ಲಿ ಬಹಳಷ್ಟು ವಿಭಿನ್ನತೆಯನ್ನು ಕಾಣಬಹುದು. ಅಲ್ಲದೆ ಚಿತ್ರದ ನಿರ್ದೇಶಕ ಅಭಿಮನ್ಯು ಸದಾನಂದ ಸರ್ ಅವರ ಜೊತೆ ನಾನು ‘ಮುಂದಿನ ನಿಲ್ದಾಣ’ ಚಿತ್ರವನ್ನು ಮಾಡಿದ್ದೆ. ಹಾಗಾಗಿ ಅವರಿಗೆ ಫ್ರೇಮಿನಲ್ಲಿ ಏನೇನು ಬೇಕು ಎಂಬ ಸ್ಪಷ್ಟ ಅರಿವು ನನಗಿದೆ. ಕಲಾವಿದರಿಗೂ ಏನೂ ಕಷ್ಟವಾಗದೆ ಎಲ್ಲವೂ ಸುಲಭವಾಗುವಂತೆ ನೋಡಿಕೊಳ್ಳುವ ಚಾಕಚಕ್ಯತೆ ಅವರಿಗಿದೆ” ಎಂದು ಚಿತ್ರತಂಡದ ಬಗ್ಗೆ ಅಭಿಪ್ರಾಯಪಟ್ಟರು.

ಮುಂದೆ ನಿಮಗೆ ಯಾವ ರೀತಿಯ ಚಿತ್ರಗಳು ಬೇಕು ಎಂಬ ಅಪೇಕ್ಷೆ ಇದೆ ಎಂದು ಕೇಳಿದ್ದಕ್ಕೆ “ನನಗೆ ಒಂದು ಬಯೋಪಿಕ್ ಮಾಡಬೇಕೆಂಬ ಆಸೆ ಇದೆ, ಯಾಕೆಂದರೆ ಇನ್ನೊಬ್ಬರ ರೀತಿ ನಟಿಸುವುದು ಬಹಳ ಚಾಲೆಂಜಿಂಗ್ ಹಾಗಾಗಿ ಆ ಪಾತ್ರವನ್ನು ಒಮ್ಮೆ ಅನುಭವಿಸುವ ಆಸೆ ಇದೆ. ನನಗೆ ಕಾಮಿಡಿ ಚಿತ್ರಗಳನ್ನು ಮಾಡುವುದಕ್ಕೂ ಬಹಳಷ್ಟು ಆಸಕ್ತಿ ಇದೆ. ಅದರದೇ ರೀತಿಯಲ್ಲಿ ಬಹಳ ಚಾಲೆಂಜಿಂಗ್, ಡೈಲಾಗ್ ಡೆಲಿವರಿಯಲ್ಲಿ ಕಾಮಿಡಿಯನ್ನು ಸಿಂಕ್ ಮಾಡುವುದು ನೋಡಿದಷ್ಟು ಸುಲಭವಲ್ಲ. ಇದಲ್ಲದೆ ಸೈನ್ಸ್ ಫಿಕ್ಷನ್ ಕೂಡ ನನ್ನ ಆಸಕ್ತಿಯಲ್ಲಿ ಒಂದು” ಎಂದರು.

ಸದ್ಯಕ್ಕೆ ನಟಿ ರಾಧಿಕಾ ನಾರಾಯಣ್ ಅವರು ರಾಜೇಂದ್ರ ಬಾಬು ಅವರ “ವೀರ ಕಂಬಳ” ಹಾಗೂ ರಮೇಶ್ ಅರವಿಂದ್ ಅವರ “ಶಿವಾಜಿ ಸುರತ್ಕಲ್ 2” ನಲ್ಲಿ ಬ್ಯುಸಿ ಆಗಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ