‘ಲವ್ ಮಾಕ್ಟೈಲ್’ ಸಿನಿಮಾ ಎಷ್ಟು ಸುಪ್ರಸಿದ್ದ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಅದರಲ್ಲೂ ಅದರಲ್ಲಿ ನಟಿಸಿದ ನಟ-ನಟಿಯರೆಲ್ಲರು ಕನ್ನಡಿಗರಿಗೆ ಈಗ ಚಿರಪರಿಚಿತ. ಇವರೆಲ್ಲರ ನಡುವೆ ಹೆಚ್ಚು ಸದ್ದು ಮಾಡಿದ ಪಾತ್ರ ‘ಹೆಂಗೆ ನಾವು ‘ ಎಂದೇ ಪ್ರಸಿದ್ಧವಾದ ರಚನಾ ಇಂದರ್ ಅವರ ಪಾತ್ರ. ‘ಲವ್ ಮಾಕ್ಟೈಲ್’ ಹಿಟ್ ಆದಮೇಲೆ ರಚನಾ ಹಿಂತಿರುಗಿ ನೋಡಲೇ ಇಲ್ಲ.

‘ಲವ್ ಮಾಕ್ಟೈಲ್’ ನಂತರ 2022ರಲ್ಲಿ ಬಿಡುಗಡೆಯಾದ ‘ಲವ್ ಮಾಕೈಲ್ 2’, ರಿಷಬ್ ಶೆಟ್ಟಿ ಅವರು ನಾಯಕರಾಗಿದ್ದ ‘ಹರಿಕಥೆ ಅಲ್ಲ ಗಿರಿಕಥೆ’, ಶಶಾಂಕ್ ಅವರ ನಿರ್ದೇಶನದ ‘ಲವ್ 360’ ಮುಂತಾದ ಸಿನಿಮಾಗಳಲ್ಲಿ ರಚನಾ ಬಣ್ಣ ಹಚ್ಚಿದ್ದಾರೆ. ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿನ ಗಿರಿಜಾ ಎಂಬ ಪಾತ್ರಕ್ಕೆ ಸಿನಿರಸಿಕರಿಂದ ಅಪಾರ ಪ್ರಶಂಸೆ ಪಡೆದಿದ್ದ ರಚನಾ, ‘ಲವ್ 360’ ಸಿನಿಮಾದ ಮೂಲಕ ಸೋಲೋ ಹೀರೋಯಿನ್ ಆಗಿ ಹೊರಹೊಮ್ಮಿದವರು. ಇದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಗುತ್ತಿರುವ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಅದಿತಿ ಪ್ರಭುದೇವ, ಮೇಘ ಶೆಟ್ಟಿಯವರ ಜೊತೆಗೆ ಗಣೇಶ ಅವರಿಗೆ ಜೋಡಿಯಾಗಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ನಾನು ಏನೂ ನಿರೀಕ್ಷೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟವಳು. ‘ಲವ್ ಮಾಕ್ಟೈಲ್’ ಮೂಲಕ ನನ್ನ ವೃತ್ತಿಜೀವನ ಆರಂಭಿಸಲು ನನಗೆ ಒಂದೊಳ್ಳೆಯ ಅವಕಾಶ ಸಿಕ್ಕಿತು. ರಿಷಬ್ ಹಾಗೂ ಕೃಷ್ಣ ಅವರಂತಹ ನಟರೊಂದಿಗೆ ನಟಿಸಿದ್ದು ಬಹಳ ಸಂತಸ ತಂದಿದೆ. ಇದೀಗ ಗಣೇಶ್ ಹಾಗು ರಂಗಾಯಣ ರಘು ಅವರಂತಹ ದೊಡ್ಡ ಕಲಾವಿದರ ಜೊತೆಗೆ ನಟಿಸುತ್ತಿರುವ ಖುಷಿ ಇದೆ” ಎನ್ನುತ್ತಾರೆ.

ಸದ್ಯ ರಚನಾ ಅವರು ಒಬ್ಬ ಎಂ ಬಿ ಎ ವಿದ್ಯಾರ್ಥಿನಿ. ಹಾಗಾಗಿ ವಿದ್ಯಾಭ್ಯಾಸ ಹಾಗು ನಟನೆ ಎರಡನ್ನೂ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದಾರೆ. “ನನಗೆ ಯಾವುದೇ ನಟನೆ ಹಿನ್ನೆಲೆ ಇಲ್ಲದಿರುವುದರಿಂದ, ನಟನೆಯನ್ನೇ ನನ್ನ ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದಾಗ ಎಜುಕೇಶನ್ ಮುಗಿಸಲೇಬೇಕು ಎಂಬ ಶರತ್ತನ್ನು ನನ್ನ ತಂದೆ ತಾಯಿ ನೀಡಿದ್ದರು. ಹಾಗಾಗಿ ನನ್ನ ಡಿಗ್ರಿ ಹಾಗು ನಟನೆ ಎರಡರಲ್ಲೂ 100% ನೀಡುವ ಪ್ರಯತ್ನ ಮಾಡುತ್ತಿದ್ದಾನೆ.” ಎಂದೂ ಹೇಳಿದ್ದಾರೆ.

‘ತ್ರಿಬಲ್ ರೈಡಿಂಗ್’ ಸಿನಿಮಾದ ಬಗೆಗೆ ಮಾತನಾಡುವ ರಚನಾ, “ನಾನು ಲವ್ ಮಾಕ್ಟೈಲ್ ಸಿನಿಮಾದ ನಂತರವೇ ‘ತ್ರಿಬಲ್ ರೈಡಿಂಗ್’ ಶೂಟಿಂಗ್ ಅಲ್ಲಿ ಪಾಲ್ಗೊಂಡಿದ್ದೆ. ಮೊದಮೊದಲು ಅಲ್ಲೇ ಡೈಲಾಗ್ ಕೊಟ್ಟಾಗ ಭಯಪಡುತ್ತಿದ್ದೆ. ನನಗೆ ಮುಂಚೆ ಸ್ಟೇಜ್ ಫಿಯರ್ ಕಾಡುತ್ತಿತ್ತು. ಆದರೆ ದಿನಕಳೆದಂತೆ ಅದು ಕಡಿಮೆಯಾಗುತ್ತಾ ಬಂತು. ‘ತ್ರಿಬಲ್ ರೈಡಿಂಗ್’ ಅಲ್ಲಿ ಮೂರು ಹೀರೋಯಿನ್ ಗಳ ಜೊತೆಗೆ ದೊಡ್ಡ ತಾರಾಗಣವೇ ಇದ್ದರೂ ಸಹ, ನಾನು ಒಂದು ಪ್ರಮುಖ ಪಾತ್ರದಲ್ಲೇ ನಟಿಸಿದ್ದಾನೆ. ಒಬ್ಬ ಬೋಲ್ಡ್ ಹುಡುಗಿಯ ಪಾತ್ರ ಇದಾಗಿದ್ದು, ಹೆಚ್ಚು ಗಣೇಶ್ ಅವರ ಜೊತೆಗೇ ನನ್ನ ದೃಶ್ಯಗಳಿರುತ್ತವೆ. ಇನ್ನು ಗಣೇಶ್ ಅವರು ಹಾಗು ರಂಗಾಯಣ ರಘು ಅವರ ಜೊತೆಗೇ ನನ್ನದು ಇದು ಮೊದಲ ಸಿನಿಮಾ. ಗಣೇಶ್ ಸರ್ ತುಂಬಾ ಆರಾಮಾಗಿರುತ್ತಾರೆ. ನಗುನಗುತ್ತಾ ಸೆಟ್ ನಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸುತ್ತಾರೆ. ಜೊತೆಗೇ ನಮ್ಮಂತಹ ಹೊಸಬರಿಗೂ ಕೂಡ ಸಹಾಯ ಮಾಡುತ್ತಾರೆ ” ಎನ್ನುತ್ತಾರೆ ರಚನಾ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ