ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಅವರೊಂದಿಗೆ ಸೈಕಲಾಜಿಕಲ್ ಹಾರರ್-ಥ್ರಿಲ್ಲರ್ ಚಿತ್ರೀಕರಣಕ್ಕೆ ಸಿದ್ಧರಾಗಿರುವ ನಟಿ ಪ್ರಿಯಾಮಣಿ, ತಮ್ಮ ಮುಂದಿರುವ ಪ್ರೊಜೆಕ್ಟ್ ಗಳ ಕುರಿತು ಹಂಚಿಕೊಂಡಿದ್ದಾರೆ. ಪತಿಯೊಂದಿಗೆ ವಿಹಾರಕ್ಕೆಂದು ದುಬೈಗೆ ತೆರಳಿದ್ದ ನಟಿ ವಾಪಸಾಗುವುದರೊಂದಿಗೆ, ಮತ್ತೆ ಕ್ಯಾಮೆರಾ ಎದುರಿಸಲು ಸಿದ್ಧರಾಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಅವರೊಂದಿಗೆ ಮುಂಬರುವ ಕನ್ನಡ ಚಿತ್ರ ‘ಕೈಮರ’ ಸೆಟ್‌ಗೆ ಸೇರಲು ತಯಾರಿ ನಡೆಸಿದ್ದಾರೆ.

“ಈ ಪ್ರಾಜೆಕ್ಟ್ ಕೋವಿಡ್ ಸಮಯದಲ್ಲಿ ಯೋಚಿಸಿರುವಂಥದ್ದು. ಆದರೆ ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ, ಇದು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಕಥೆ. ನಿರ್ದೇಶಕ ಗೌತಮ್ ವಿಪಿ ನನಗೆ ಈ ಸ್ಟೋರಿಯನ್ನು ವಿವರಿಸಿದಾಗ ತುಂಬಾ ಖುಷಿಯಾಯಿತು. ಚಿತ್ರದಲ್ಲಿ ನಾನು ಎರಡು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ” ಎಂದು ಚಿತ್ರದ ಕುರಿತಂತೆ ಮಾತನಾಡಿದರು.

ಮುಂದುವರೆಸಿ “ಇದು ಸೈಕಲಾಜಿಕಲ್ ಹಾರರ್-ಥ್ರಿಲ್ಲರ್ ಸಿನಿಮಾ. ಪ್ರಿಯಾಂಕಾ, ಛಾಯಾ ಮತ್ತು ನಾನು ವಿಶಿಷ್ಟವಾದ ಪಾತ್ರಗಳಲ್ಲಿ ಅಭಿನಯಿಸಿದ್ದೇವೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದೆ. ನನ್ನನ್ನು ಹಿಂದೆಂದೂ ನೋಡಿರದ ರೂಪದಲ್ಲಿ ನೀವು ಈ ಸಿನಿಮಾದಲ್ಲಿ ನೋಡುವಿರಿ” ಎಂದು ಖುಷಿ ವ್ಯಕ್ತಪಡಿಸಿದರು.

ಪ್ರಿಯಾಮಣಿ ಇತ್ತೀಚಿನ ವರ್ಷಗಳಲ್ಲಂತೂ ಬಹು ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು. ಯಾಕೆಂದರೆ ಅವರು ದಕ್ಷಿಣ ಭಾರತದ ಭಾಷೆಗಳಿಗೆ ಸೀಮಿತವಾಗಿರದೆ ಬಾಲಿವುಡ್ ನಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಬಂದ ಮೇಲಂತೂ ಅವರ ಅಭಿಮಾನಿಗಳು ಹೆಚ್ಚೇ ಆಗಿದ್ದಾರೆ.

ಇದೀಗ ಮತ್ತೆ ಪ್ರಿಯಾ, ಪ್ಯಾನ್-ಇಂಡಿಯಾ ವೆಬ್ ಸರಣಿ ಸರ್ವಂ ಶಕ್ತಿ ಮಯಂನಲ್ಲಿ ಸಂಜಯ್ ಸೂರಿ ಮತ್ತು ಸಮೀರ್ ಸೋನಿ ಜೊತೆ ನಟಿಸಲು ಸಿದ್ದರಾಗಿದ್ದಾರೆ.
ಸರ್ವಂಶಕ್ತಿಮಯಂ ಕುರಿತಂತೆ ಮಾತನಾಡಿದ ನಟಿ “ಭಾರತದಾದ್ಯಂತ ಇರುವ ಎಲ್ಲಾ ಶಕ್ತಿ ಪೀಠಗಳಿಗೆ ಭೇಟಿ ನೀಡಲು ನಿರ್ಧರಿಸಿದ ನಿಷ್ಕ್ರಿಯ ಕುಟುಂಬದ ಕಥೆ ಇದು. ಅವರು ಹೇಗೆ ಪ್ರಯಾಣ ಮಾಡುತ್ತಾರೆ ಮತ್ತು ತಮ್ಮ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದು ಮುಖ್ಯ ಅಂಶವಾಗಿದೆ” ಎಂದರು.

OTT ಫ್ಲಾಟ್ ಫಾರಂ ಮತ್ತು ಥಿಯೇಟರ್ ಬಿಡುಗಡೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾ, “ನಾನು ಯಾವಾಗಲೂ ಡಿಜಿಟಲ್ ಭವಿಷ್ಯವನ್ನು ಉಳಿಸಿಕೊಂಡಿದ್ದೇನೆ. OTT ಉತ್ತರ ಮತ್ತು ದಕ್ಷಿಣದ ನಡುವಿದ್ದ ಗೆರೆಗಳನ್ನು ಅಳಿಸಿ ಹಾಕಿದೆ ಮತ್ತು ಪ್ರೇಕ್ಷಕರು ಪ್ರತಿಭೆಗಳನ್ನು ಗುರುತಿಸುತ್ತಿದ್ದಾರೆ. ದಕ್ಷಿಣದ ಬಹಳಷ್ಟು ನಟರು ಭಾರತದಾದ್ಯಂತ ಗುರುತಿಸಲ್ಪಡುತ್ತಿದ್ದಾರೆ.
ಮತ್ತೊಂದೆಡೆ, ಥಿಯೇಟರ್ ಅನುಭವದ ಹತ್ತಿರ ಇದೇನೂ ಬರುವುದಿಲ್ಲ. ಆ ಛಾಯಾಗ್ರಹಣ, ಧ್ವನಿ ಒಟ್ಟಿನಲ್ಲಿ ಇಡೀ ವಾತಾವರಣವೇ ವಿಭಿನ್ನವಾದ ಚೆಂಡಿನ ಆಟದಂತಿರುತ್ತದೆ. ಅದನ್ನು ನಾವು ಯಾವುದರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಪ್ರೇಕ್ಷಕರು ದೊಡ್ಡ ಪರದೆಯಲ್ಲಿ ಉತ್ತಮ ಚಲನಚಿತ್ರವನ್ನು ಆನಂದಿಸುವುದು ಮತ್ತು ಉತ್ತಮ ಸಿನೆಮಾದ ತೃಪ್ತಿಯೊಂದಿಗೆ ಹಿಂತಿರುಗುವುದು ಎಲ್ಲೂ ಸಿಗದ ಖುಷಿಯನ್ನು ನೀಡುತ್ತದೆ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ