ರಾಮಧಾನ್ಯ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ನಿಮಿಕಾ ರತ್ನಾಕರ್ ಕೊನೆಗೂ ಸಂತೋಷ ಪಡುವ ಕಾಲ ಬಂದಿದೆ. ಹೌದು! ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಈಕೆ 2018ರಲ್ಲಿ ನಟಿಯಾಗಿ ಸ್ಯಾಂಡಲ್ ವುಡ್ ಗೆ ಬಂದರು. ಅದಾದ ಮೇಲೆ 4 ವರ್ಷಗಳ ಬಳಿಕ ಇದೀಗ ಅವರ ನಾಲ್ಕು ಚಿತ್ರಗಳು ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳಲು ರೆಡಿಯಾಗಿವೆ.

ನಿಮಿಕಾ ರತ್ನಾಕರ್ ಅಭಿನಯಿಸಿರುವ ಮಿಸ್ಟರ್ ಬ್ಯಾಚುಲರ್ ಹಾಗೂ ತ್ರಿಶೂಲಂ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಜೊತೆಗೆ ಅಬ್ಬರ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಿಮಿಕಾ ಅವರು ನಟಿಸಿದ್ದು ಅದು ಈಗಾಗಲೇ ಬಿಡುಗಡೆಗೊಂಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟಿ ನಿಮಿಕಾ ರತ್ನಾಕರ್, ತಮ್ಮ ಜೀವನ ಹಾಗೂ ಕನಸುಗಳ ಬಗ್ಗೆ ಮಾತನಾಡಿದ್ದಾರೆ.
“ನನಗೆ ಐಎಎಸ್ ಅಧಿಕಾರಿ ಅಥವಾ ಸಂಗೀತಗಾರ್ತಿಯಾಗುವ ಕನಸಿತ್ತು. ನಾನು ಉತ್ತಮ ವಾಗ್ಮಿಯೂ ಹೌದು, ಡ್ಯಾನ್ಸ್ ಕೂಡ ಮಾಡುತ್ತೇನೆ. ಚಿಕ್ಕಂದಿನಿಂದಲೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನನ್ನ ನೆಚ್ಚಿನ ಹವ್ಯಾಸ. ಆದರೆ ಹೀಗೆ ನಟನೆಗೆ ಬರುತ್ತೇನೆ ಎಂದು ತಿಳಿದಿರಲಿಲ್ಲ. ಈಗ ತುಂಬಾ ಖುಷಿಯಾಗುತ್ತಿದೆ” ಎಂದು ಹೇಳಿದ್ದಾರೆ.

“ಜೀವನದ ಗುರಿಗಳು ಬೇರೆ ಬೇರೆಯಾಗಿದ್ದರೂ ಅದು ಹೇಗೋ ನಟನೆಗೆ ಬಂದು ನಿಂತೆ. ಆದರೆ ಇದು ನಾನು ತೆಗೆದುಕೊಂಡ ಬಹಳ ಒಳ್ಳೆಯ ನಿರ್ಧಾರ ಎಂದು ಈಗ ನನಗೆ ಅರ್ಥವಾಗುತ್ತಿದೆ. ಮಧ್ಯದಲ್ಲಿ ಬಂದ ಕರೋನಾ ಫ್ಯಾಂಡಮಿಕ್ ನನ್ನ ವೃತ್ತಿ ಜೀವನಕ್ಕೆ ತುಸು ಪೆಟ್ಟು ನೀಡಿದ್ದು ನಿಜ. ಆದರೆ ಅದಾದ ಮೇಲೆ ಈಗ ಒದಗಿ ಬಂದಿರುವ ಅವಕಾಶಗಳಿಗೆ ನಾನು ಆಭಾರಿ. ಈ ನಾಲ್ಕು ಚಿತ್ರಗಳಲ್ಲಿ ಒಂದಾದರೂ ನನಗೆ ಬಿಗ್ ಬ್ರೇಕ್ ನೀಡುತ್ತದೆ ಎಂದು ನಂಬಿದ್ದೇನೆ” ಎಂದರು.

ಇನ್ನು ನಟನೆಯ ಬಗ್ಗೆ ಮಾತನಾಡಿದ ಆಕೆ “ಮೊದಲಿನಿಂದಲೂ ನನಗೆ ಸಂತೋಷ ಕೊಡುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಅದು ಯಾವುದೇ ಪಾತ್ರವಾಗಬಹುದು ನನಗೆ ಸಂತೃಪ್ತಿ ಇರಬೇಕು. ಪಾತ್ರ ಎಷ್ಟು ಚಿಕ್ಕದ್ದು ದೊಡ್ಡದು ಎಂಬುದಕ್ಕಿಂತ ಅದರಿಂದ ನಾನೇನು ಕಲಿಯಬಲ್ಲೆ ಎಂಬುದೇ ನನಗೆ ಮುಖ್ಯ. ಒಟ್ಟಿನಲ್ಲಿ ಚಿತ್ರರಂಗಕ್ಕೆ ಬಂದಿದ್ದು ನನಗೆ ಬಹಳ ಖುಷಿ ಇದೆ ಒಳ್ಳೊಳ್ಳೆಯ ಪಾತ್ರಗಳ ಮೂಲಕ ಒಳ್ಳೆಯ ಸಿನಿ ಭವಿಷ್ಯವನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ