ಈಗಷ್ಟೇ ಬಿಡುಗಡೆಯಾಗಿರುವ ಪಾನ್ ಇಂಡಿಯಾ ಚಿತ್ರ ಬನಾರಸ್ ಮೂಲಕ ಸಿನಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ನಟ ಝೈದ್ ಖಾನ್ ಸೋನಲ್ ಮಾಂಟೆರಿಯೊ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನಿರ್ದೇಶಕ ಜಯತೀರ್ಥ ನಿರ್ದೇಶನದಲ್ಲಿ ನ್ಯಾಷನಲ್ ಖಾನ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಕುರಿತು ನಾಯಕ ನಟ ಝೈದ್ ಖಾನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ರಾಜಕೀಯ ಹಿನ್ನೆಲೆಯಿರುವ ಝೈದ್ ಖಾನ್ ನಟನೆಗೆ ಬಂದಿರುವುದು ವಿಶೇಷವೇ ಸರಿ. ಅಂದ ಹಾಗೆ ಇವರು ಕರ್ನಾಟಕದ ಕಾಂಗ್ರೆಸ್ ಶಾಸಕ ಝಮೀರ್ ಅಹಮದ್ ಖಾನ್ ಅವರ ಪುತ್ರ. “ನಮಗೆ ಮೊದಲಿನಿಂದಲೂ ಡಾ. ರಾಜಕುಮಾರವರ ಕುಟುಂಬದೊಂದಿಗೆ ಒಳ್ಳೆಯ ಸಂಬಂಧವಿದೆ. ಬಹುಷಃ ಈ ಅಂಶವೇ ನನಗೆ ನಟನೆಯನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸಿತೇನೋ. ಅಲ್ಲದೆ ಚಿಕ್ಕಂದಿನಿಂದಲೂ ವೇದಿಕೆಗೆ ಹೋಗಿ ಏನನ್ನಾದರೂ ಪರ್ಫಾರ್ಮ್ ಮಾಡುವುದು ನನ್ನ ನೆಚ್ಚಿನ ಹವ್ಯಾಸ. ನನಗೆ ಮೊದಲಿನಿಂದಲೂ ಇದಕ್ಕೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ. ಹಾಗಾಗಿ ಮುಂಬೈನಲ್ಲಿ ನಟನೆಗೆ ಸಂಬಂಧಪಟ್ಟ ಕೋರ್ಸ್ ಮುಗಿಸಿ ಈ ಚಿತ್ರಕ್ಕೆ ಒಪ್ಪಿಕೊಂಡೆ” ಎಂದರು.

ಬನಾರಸ್ ಚಿತ್ರದಲ್ಲಿ ನಾನು ಒಬ್ಬ ಕಾಲೇಜ್ ಹುಡುಗನ ಪಾತ್ರ ಮಾಡಿದ್ದೇನೆ. ಈ ಚಿತ್ರದ ಹೈಲೈಟೇ ‘ಬನಾರಸ್’. ಅಲ್ಲಿ ಮಾಡಿರುವ ಶೂಟ್, ತೆಗೆದ ಶಾಟ್ ಎಲ್ಲವೂ ಅದ್ಭುತ. ಆ ಊರಲ್ಲಿ ಅದೇನೋ ಒಂದು ಪಾಸಿಟಿವ್ ವೈಬ್ ಇದೆ. ಸ್ವತಃ ನಾನು ಶೂಟಿಂಗ್ ಸಮಯದಲ್ಲಿ ಅಲ್ಲೆಲ್ಲಾ ಚೆನ್ನಾಗಿ ಓಡಾಡಿದ್ದೇನೆ. ಕಾಶಿ ಹಾಗೂ ಅಲ್ಲಿನ ಅನುಭವಗಳು ನನಗೆ ಜೀವನವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವುದಕ್ಕೆ ಹೇಳಿಕೊಟ್ಟಿದೆ. ಸದಾ ಪೂಜೆ ಪುನಸ್ಕಾರಗಳು ನಡೆವ ಆ ಸ್ಥಳದಲ್ಲಿ ಅದೇನೊ ಅದ್ಭುತ ಶಕ್ತಿ, ಒಂದು ಪಾಸಿಟಿವ್ ವೈಬ್ ಇರುವುದಂತೂ ನಿಜ” ಎಂದರು

ಇನ್ನು ನಿರ್ದೇಶಕ ಜಯತೀರ್ಥ ಅವರ ಬಗ್ಗೆ ಮಾತನಾಡುತ್ತಾ “ನನಗೆ ಇಂಥ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಅವರ ಶೂಟಿಂಗ್ ಶೈಲಿ ನನಗೆ ತುಂಬಾ ಹಿಡಿಸಿತು. ಒಬ್ಬ ಕಲಾವಿದನಿಂದ ಒಳ್ಳೆಯ ನಟನೆಯನ್ನು ಹೊರತೆಗೆಯುವ ಚಾಕಚಕ್ಯತೆ ಅವರಲ್ಲಿದೆ.” ಎಂದರು. ಅಂದ ಹಾಗೇ ಈ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ಅನಿಸಿಕೆಗಳನ್ನು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ