ಸೆಲೆಬ್ರಿಟಿಗಳ ಹುಟ್ಟುಹಬ್ಬವನ್ನು ಅವರು ಸಂಭ್ರಮಿಸುವುದಕ್ಕಿಂತ ಅಭಿಮಾನಿಗಳೇ ಹೆಚ್ಚು ಸಂಭ್ರಮಿಸುತ್ತಾರೆಂದರೂ ಒಂದು ರೀತಿಯಲ್ಲಿ ತಪ್ಪಲ್ಲ. ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬ ಬಂತೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಆ ದಿನ ಅವರನ್ನು ಭೇಟಿಮಾಡಬೇಕು, ಲೈವ್ ವಿಶ್ ಮಾಡಬೇಕು ಇತ್ಯಾದಿ ಆಸೆಗಳು ಅದೆಷ್ಟೋ ಫ್ಯಾನ್ಸ್ ಗಳಿಗಿರುತ್ತದೆ.
ಆದರೆ ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕನ್ನಡದ ಸ್ಟಾರ್ ನಟರ ಲೈವ್ ಹುಟ್ಟುಹಬ್ಬವನ್ನಾಚರಿಸುವ ಖುಷಿ ಅಷ್ಟಾಗಿ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಇನ್ನು ಪುನೀತ್ ರಾಜಕುಮಾರ್ ನಿಧನದ ನಂತರವಂತೂ ಸರಳ ಆಚರಣೆಯೂ ನಡೆದದ್ದು ಕಡಿಮೆ.

ಇದೀಗ ಮತ್ತೆ ಅಭಿಮಾನಿಗಳ ಆಸೆಗೆ ಕಳೆ ಬಂದಂತಾಗಿದೆ. ಒಬ್ಬೊಬ್ಬರೇ ನಟರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಲು ಪ್ರಾರಂಭಿಸಿದ್ದಾರೆ. ನಿನ್ನೆ ಮೊನ್ನೆಯಷ್ಟೇ ಸುದೀಪ್ ಹುಟ್ಟುಹಬ್ಬ ಕಳೆದಾಯಿತು. ನಟ ಸುದೀಪ್ ಕೊರೊನಾಗೂ ಮೊದಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಹಾಗಾಗಿ ಹಲವು ವರ್ಷಗಳ ಗ್ಯಾಪ್ ಬಳಿಕ ಇದೀಗ ತಮ್ಮ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಈಗ ಮುಂದಿನ ಸರದಿ ರಿಯಲ್ ಸ್ಟಾರ್ ಉಪೇಂದ್ರರದ್ದು. ಅಂದಹಾಗೆ ಸೆಪ್ಟೆಂಬರ್ 18 ಉಪೇಂದ್ರ ಅವರ ಹುಟ್ಟುಹಬ್ಬ. ಕಳೆದ ಎರಡು ವರ್ಷಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ಉಪೇಂದ್ರ ತಮ್ಮ ಅಭಿಮಾನಿಗಳ ಜೊತೆಗೆ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಉಪೇಂದ್ರ ಎಲ್ಲರಿಗೂ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ. ಆದರೆ ಈ ಬಾರಿ ಕೇಕ್, ಹಾರ, ಬಗೆಬಗೆಯ ಉಡುಗೊರೆಗಳಿಗೆ ಬದಲಾಗಿ ವಿಶೇಷವಾದ ಗಿಫ್ಟೊಂದನ್ನು ಉಪೇಂದ್ರ ಕೇಳುತ್ತಿದ್ದಾರೆ.

ಹೌದು, ನಟ ಉಪೇಂದ್ರ ಈ ಬಾರಿ ತಮಗೆ ಶುಭಕೋರಲು ಬರುವವರಲ್ಲಿ ವಿಶೇಷವಾದ ಉಡುಗೊರೆಯನ್ನು ಕೇಳಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಬರುವವರು ಮರೆಯದೇ ಈ ಉಡುಗೊರೆಯನ್ನು ತರಲೇಬೇಕು ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ ನಟ ಉಪೇಂದ್ರ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಉಪೇಂದ್ರ, ‘ವಿಚಾರವಂತರಾಗೋಣವೇ?, ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಛ, ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ’ ಎಂದು ಬರೆದಿದ್ದಾರೆ.

ಕಳೆದ ವರ್ಷ ನಟ ಉಪೇಂದ್ರ ಕೊರೊನಾ ಕಾರಣಕ್ಕೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. 2020ರಲ್ಲಿ ಕೂಡ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದರು. ಹಾಗಾಗಿ ಈ ಬಾರಿಯ ಉಪೇಂದ್ರ ಬರ್ತ್‌ಡೇ ಅತ್ಯಂತ ವಿಶೇಷವಾಗಿರಲಿದೆ. ನಟ ಉಪೇಂದ್ರ ತಾವು ನಿರೀಕ್ಷೆ ಮಾಡಿರುವ ಉಡುಗೊರೆಯನ್ನು ಅಭಿಮಾನಿಗಳು ಮರೆಯದೇ ತರುತ್ತಾರೆ ಎನ್ನುವ ಆಕಾಂಕ್ಷೆಯಲ್ಲಿದ್ದಾರೆ. ಅವರು ಈ ಬಾರಿಯ ಹುಟ್ಟುಹಬ್ಬದ ಮೂಲಕ ಯಾವ ವಿಚಾರಗಳನ್ನು ಮಂಡಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ