ಎಲ್ಲರಿಗೂ ಸಿಹಿ ಸುದ್ದಿ ಎಂಬಂತೆ ರಾಮಾಚಾರಿ 2.0 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈಗ ಶೂಟಿಂಗ್ ನಂತರದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ನಡೆಯುತ್ತಿದೆ. ಈ ಸಿನೆಮಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಸದ್ಯ ಚಿತ್ರದ ಟೀಸರ್ ಹೊರಬಂದಿದೆ.
ರಾಮಾಚಾರಿ ಎಂದಾಕ್ಷಣ ನಮಗೆ ನೆನಪಾಗುವುದು ಒಂದು ನಾಗರಹಾವು ರಾಮಾಚಾರಿ, ಇನ್ನೊಂದು ಪೆದ್ದು ಪ್ರಾಮಾಣಿಕ ರಾಮಾಚಾರಿ. ರಾಮಾಚಾರಿ ಹೆಸರಿನೊಂದಿಗೆಯೇ ಡಾ. ವಿಷ್ಣುವರ್ಧನ್ ಮತ್ತು ರವಿಚಂದ್ರನ್ ನೆನಪಾಗಿ ಬಿಡುತ್ತಾರೆ.
ಆದರೆ ಕನ್ನಡದಲ್ಲಿ ಇನ್ನೂ ಒಬ್ಬ ರಾಮಾಚಾರಿ ಬರಲು ತಯಾರಾಗಿದ್ದಾರೆ. ಒಂದು ರೀತಿ ಕಾರ್ಪೋರೇಟ್ ರಾಮಾಚಾರಿಯೆಂದರೂ ತಪ್ಪಲ್ಲ. ಬಿಡಿ.ಅಂತೆಯೇ ಈ ರಾಮಾಚಾರಿ ಪೆದ್ದೂ ಅಲ್ಲ, ಸಿಡುಕನೂ ಅಲ್ಲ, ಬದಲಾಗಿ ಬುದ್ದಿವಂತ. ಇದನ್ನೆಲ್ಲಾ ಹೇಳುವಂತೆ ಮೊನ್ನೆ ಈ ರಾಮಾಚಾರಿಯ ಟೀಸರ್ ಹೊರಬಿದ್ದಿದೆ. ರಾಮಾಚಾರಿ 2.0 ಚಿತ್ರದ ಕುರಿತು ಈ ರಾಮಾಚಾರಿ ಮಾತನಾಡಿದ್ದಾರೆ ಕೂಡ.

ಕನ್ನಡಿಗರಿಗೆ ಸದಾ ಸ್ಫೂರ್ತಿಯಾಗಿರುವ ರಾಮಾಚಾರಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಮಿಂಚಿದ್ದು ಗೊತ್ತೇ ಇದೆ. ಹೌದು. ನವ ನಟ ತೇಜ್ ಈ ಸಲ ಕನ್ನಡದ ರಾಮಾಚಾರಿಯ ಮೊಮ್ಮಗನಾಗಿಯೇ ಬರ್ತಿದ್ದಾರೆ. ನಾಗರಹಾವು ರಾಮಾಚಾರಿಯ ಮೊಮ್ಮಗನಾಗಿಯೇ ಅವರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ಬಿಟ್ಟರೆ, ಆ ರಾಮಾಚಾರಿಗೂ ಈ ರಾಮಾಚಾರಿಗೂ ಎಲ್ಲೂ ಲಿಂಕ್ ಇಲ್ಲ. ಈ ರಾಮಾಚಾರಿ ಕಂಪ್ಲೀಟ್ ಬೇರೆಯದೇ ತೆರನಿದೆ. ಈ ಚಿತ್ರದ ಟೀಸರ್ನಲ್ಲಿ ರಾಮಾಚಾರಿ 2.0 ಪಾತ್ರದ ಪರಿಚಯ ಸಿಗುತ್ತದೆ. ಇಡೀ ರಾಮಾಚಾರಿ ಖದರ್ ಎಲ್ಲರನ್ನು ಸೆಳೆಯುವ ಕೆಲಸ ಮಾಡುತ್ತದೆ. ಅಂದ ಹಾಗೆ ನಟಿ ಮೇಘನಾರಾಜ್ ಅವರ ರಿಲೇಟಿವ್ ಈ ರಾಮಾಚಾರಿ. ಹೆಸರು ತೇಜ್. ವಿಶೇಷವೆಂದ್ರೆ, ಈ ರಾಮಾಚಾರಿ ಚಿತ್ರಕ್ಕಾಗಿಯೇ ಸೂಕ್ತ ತಯಾರಿಯನ್ನು ಮಾಡಿಕೊಂಡಿದ್ದು, ಈ ಒಂದೇ ಚಿತ್ರಕ್ಕಾಗಿಯೇ ಮೂರು, ಮೂರು ಕೆಲಸವನ್ನು ಮಾಡಿಕೊಂಡು ರಿಲೀಸ್ ಗೆ ರೆಡಿ ಆಗುತ್ತಿದ್ದಾರೆ.

ಇನ್ನೊಂದು ವಿಷಯವೆಂದರೆ ರಾಮಾಚಾರಿ ಚಿತ್ರವನ್ನು ನಾಯಕ ನಟ ತೇಜ್ ಅವರೇ ಡೈರೆಕ್ಟ್ ಮಾಡಿದ್ದಾರೆ. ತಾವೇ ತಮ್ಮ ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದಾರೆ. ತೆರೆ ಮೇಲೆ ಬಂದು ಈ ಮೂರು ಕೆಲಸವನ್ನು ಈಗಾಗಲೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಇದೇ ತಿಂಗಳು ಡಬ್ಬಿಂಗ್ ಕಾರ್ಯ ಕೂಡ ಆರಂಭಗೊಳ್ಳುತ್ತದೆ. ಡಿಸೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಗೆ ಪ್ಲಾನ್ ಹಾಕಲಾಗಿದೆ.

ರಾಮಾಚಾರಿ 2.0 ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮವೂ ಹೌದು. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.
ಸ್ಪರ್ಶ ರೇಖಾ, ಚಂದನಾ ಸ್ವಾತಿ, ವಿಜಯ್ ಚಂಡೂರ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. ಇಷ್ಟೆಲ್ಲಾ ಕಲಾವಿದರ ಈ ಸಿನೆಮಾ ರಾಮಾಚಾರಿ ಅನ್ನೋ ಟೈಟಲ್ ಮೂಲಕವೇ ಸೆಳೆಯುತ್ತಿದ್ದು, ಹೆಚ್ಚು ಕಡಿಮೆ ಕಳೆದ ಎರಡು ವರ್ಷದ ಹಿಂದೆಯೇ ಈ ಚಿತ್ರ ಸೆಟ್ಟೇರಿತ್ತು. ಈಗ ಎಲ್ಲ ಕೆಲಸ ಮುಗಿಸಿಕೊಂಡು ರಿಲೀಸ್ ಗೆ ರೆಡಿ ಆಗುತ್ತಿದೆ.