‘ಕರ್ನಾಟಕ ರತ್ನ’, ಕನ್ನಡಿಗರ ಮನೆ ಮಗ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಸುಮಾರು ಒಂದು ವರ್ಷವೇ ಕಳೆಯುತ್ತಾ ಬಂತು. ಆದರೆ ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ-ಅಭಿಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಿಂಚಿತ್ತೂ ಕಡಿಮೆಯಾಗುತ್ತಿಲ್ಲ. ತಮ್ಮ ಸಿನಿಮಾ, ನಟನೆ ಇವೆಲ್ಲವುದರಿಂದ ಮಾತ್ರವಲ್ಲದೆ, ತಮ್ಮ ಸಮಾಜಸ್ನೇಹಿ ಗುಣ, ಕೆಲಸಗಳು ಮುಂತಾದವುಗಳಿಂದ ನಮ್ಮೆಲ್ಲರ ಮನಸಿನಲ್ಲೂ ಅಜರಾಮರರಾಗಿ ಉಳಿದಿದ್ದಾರೆ ಅಪ್ಪು.

ಸಾಮಾನ್ಯ ಜನತೆಯಷ್ಟೇ ಅಲ್ಲದೇ ಸ್ಟಾರ್ ನಟರು ಕೂಡ ಅಪ್ಪು ಅವರನ್ನು ಅಪಾರ ಪ್ರೀತಿ-ಗೌರವದಿಂದ ನೆನೆಯುತ್ತಾರೆ. ಇದು ಕೇವಲ ಕನ್ನಡ ನಾಡಿಗಷ್ಟೇ ಸೀಮಿತವಲ್ಲ. ಭಾರತ ದೇಶದಾದ್ಯಂತ ನಟರು, ನಿರ್ದೇಶಕರು, ವೀಕ್ಷಕರು ಎಲ್ಲರೂ ಅಪ್ಪು ಬಗೆಗೆ ಅಪಾರ ಅಭಿಮಾನ ಹೊಂದಿದ್ದಾರೆ. ಈಗ ಈ ವಿಚಾರ ಮತ್ತೊಮ್ಮೆ ಸಾಬೀತಾಗಿದೆ..

ನಮ್ಮ ನೆರೆಹೊರೆಯ ಚಿತ್ರರಂಗಗಳ ಜೊತೆಗೆ ಅಪ್ಪು ಉತ್ತಮ ಸ್ನೇಹ ಹೊಂದಿದ್ದರು. ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಅಪ್ಪು ಅವರ ಸ್ನೇಹಹಸ್ತವಿತ್ತು. ಸದ್ಯ ತೆಲುಗಿನ ಸ್ಟಾರ್ ನಟ ರಾಣ ದಗ್ಗುಬಾಟಿ ಅಪ್ಪು ಜೊತೆಗೆನ ಬಾಂಧವ್ಯವನ್ನು ಎತ್ತಿ ಹಿಡಿದಿದ್ದಾರೆ. ನಮ್ಮ ನಾಡಿನಲ್ಲಿ ಹಲವು ಪ್ರಮುಖ ಸ್ಥಳಗಳು, ರಸ್ತೆಗಳಿಗೆ ಅಪ್ಪು ಅವರ ಹೆಸರಿಟ್ಟು, ಹಲವು ಕಡೆಗಳಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ತಳಿ ಸ್ಥಾಪಿಸುವುದರ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಅದೇ ರೀತಿ ರಾಣ ದಗ್ಗುಬಾಟಿಯವರು ಅಪ್ಪು ಅವರ ಪುಟ್ಟ ಪ್ರತಿಮೆಯೊಂದನ್ನು ತಮ್ಮ ಆಫೀಸ್ ಅಲ್ಲಿಟ್ಟುಕೊಂಡಿದ್ದು, “ಒಂದು ಸುಂದರ ಸ್ಮರಣಿಕೆ ಇಂದು ನನ್ನನ್ನು ತಲುಪಿತು. ಮಿಸ್ ಯು ಗೆಳೆಯ ಪುನೀತ್ ರಾಜಕುಮಾರ್” ಎಂದು ಭಾವನಾತ್ಮಕವಾಗಿ ಬರೆದುಕೊಂಡು ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಪಾರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಅಪ್ಪು ಅವರು ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಅನ್ನು ಅಪಾರ ಜನಸಾಗರ ಚಿತ್ರಮಂದಿರಗಳಿಗೆ ಹೋಗಿ ಕಣ್ತುಂಬಿಕೊಂಡಿದ್ದರು. ಇತ್ತೀಚಿಗಷ್ಟೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದ್ದ, ಅಪ್ಪು ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದ ‘ಲಕ್ಕಿಮ್ಯಾನ್’ ಸಿನಿಮಾ ಕೂಡ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಭಿಮಾನಿಗಳ ಕಂಗಳಲ್ಲಿ ನೀರು ತುಂಬಿಸಿತ್ತು. ಸದ್ಯ ಕನ್ನಡಿಗರು ಪುನೀತ್ ಅವರ ಕನಸಿನ ಕೂಸಾಗಿದ್ದ, ‘ಗಂಧದಗುಡಿ’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇದೇ ಅಕ್ಟೋಬರ್ 9 ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, 28ಕ್ಕೆಸಿನಿಮಾ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ದಿನಕಳೆದಂತೆ ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನ ಹೆಚ್ಚಾಗುತ್ತಲೇ ಇದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ