ಕನ್ನಡ ಚಿತ್ರರಂಗದ ಹೆಸರಾಂತ ನಟ ನಿರ್ದೇಶಕರಾಗಿರುವ ರಮೇಶ್ ಅರವಿಂದ್ ಅವರು ಸದ್ಯ ತಮ್ಮ ಬಹುಕಾಲದ ಕನಸೊಂದನ್ನು ನನಸಾಗಿಸಿಕೊಂಡ ಸಂತಸದಲ್ಲಿದ್ದಾರೆ. ಹೌದು, ಪ್ರಸ್ತುತ ಕನ್ನಡ ಕರಾವಳಿಯ ಉಡುಪಿಯಲ್ಲಿರುವ ರಮೇಶ್ ಅರವಿಂದ್ ಅವರು, ಯಕ್ಷಗಾನದ ವೇಷದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಉಡುಪಿಯ ಪ್ರವಾಸದಲ್ಲಿರುವ ರಮೇಶ್ ಅರವಿಂದ್ ಅವರು, ಯಕ್ಷಗಾನ ಪಾತ್ರದಾರಿಯ ವೇಷ ತೊಟ್ಟು, ಬಣ್ಣ ಹಚ್ಚಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

ಸಾಹಿತಿ ಶಿವರಾಮ್ ಕಾರಂತ್ ಅವರ ಸವಿನೆನಪಿನಲ್ಲಿ ‘ಶಿವರಾಮ ಕಾರಂತ ಹುಟ್ಟೂರ’ ಎಂಬ ಪ್ರಶಸ್ತಿಯನ್ನು ರಮೇಶ್ ಅವರಿಗೆ ನೀಡುವುದೆಂದು ಘೋಷಿಸಲಾಗಿತ್ತು. ಅಂತೆಯೇ ಅದನ್ನು ಸ್ವೀಕರಿಸಲು ಉಡುಪಿ ಜಿಲ್ಲೆಯ ಕೋಟಕ್ಕೆ ಬಂದಿದ್ದ ರಮೇಶ್ ಅವರು, ಪ್ರಶಸ್ತಿ ಸ್ವೀಕರಿಸಿ, ಕುದ್ರು ನೆಸ್ಟ್ ಎಂಬ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದರು.

ಈ ನಡುವೆ ಉಡುಪಿಯ ಕೋಡಂಗಳ ಮೂಲದ ಪ್ರಖ್ಯಾತ ಛಾಯಾಗ್ರಾಹಕ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವಂತಹ ಫೋಕಸ್ ರಾಘು ಎಂದೇ ಖ್ಯಾತರಾಗಿರುವ ರಾಘವೇಂದ್ರ ಅವರ ಛಾಯಾಗ್ರಾಹಣದ ಚಿತ್ರಗಳನ್ನು ನೋಡಿ ಬಹುವಾಗಿ ಮೆಚ್ಚಿಕೊಂಡ ರಮೇಶ್ ಅರವಿಂದ್ ಅವರು, ಅವರ ಬಳಿಯೇ ನನ್ನ ಫೋಟೋಶೂಟ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷವೇಷ ಧರಿಸುವ ತಮ್ಮ ಆಸೆಯನ್ನು ರಮೇಶ್ ಅವರು ಹೇಳಿಕೊಂಡಿದ್ದರಿಂದ, ಯಕ್ಷಗಾನದ ಸಾಂಪ್ರದಾಯಿಕ ವೇಷ, ಬಣ್ಣಗಳನ್ನು ಕಲಾವಿದ ಶೈಲೇಶ್ ಅವರು ಏರ್ಪಡಿಸಿದ್ದರು.

ಉಡುಪಿಯ ಸುವರ್ಣ ನದಿ ತೀರದಲ್ಲಿರುವ ಈ ಕುದ್ರು ನೆಸ್ಟ್ ಹೋಮ್ ಸ್ಟೇನಲ್ಲಿ ಮೊದಲ ಬಾರಿ ಯಕ್ಷಗಾನದ ವೇಷ ಧರಿಸುವ ಮೂಲಕ ತಮ್ಮ ದಶಕಗಳ ಕನಸನ್ನು ರಮೇಶ್ ನನಸಾಗಿಸಿಕೊಂಡಿದ್ದಾರೆ. ಬಣ್ಣ ಹಚ್ಚಿಕೊಂಡು ವಿವಿಧ ಯಕ್ಷಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ