ರಾಜೇಶ್ ಧ್ರುವ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖವಾದರೂ ಅವರ ಹೆಸರು ಅಪರಿಚಿತ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಿರುತೆರೆ ಜಗತ್ತಿನಲ್ಲಿ ರಾಜೇಶ್ ಧ್ರುವ ಅವರು ಅಖಿಲ್ ಎಂದೇ ಫೇಮಸ್ಸು! ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿದ್ದ ಅಗ್ನಿಸಾಕ್ಷಿಯಲ್ಲಿ ನಾಯಕ ಸಿದ್ಧಾರ್ಥ್ ತಮ್ಮ ಅಖಿಲ್ ಆಗ ನಟಿಸಿ ಬರೋಬ್ಬರಿ ಏಳು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸುತ್ತಿದ್ದ ರಾಜೇಶ್ ಧ್ರುವ ಸಿಹಿ ಸುದ್ದಿ ನೀಡಿದ್ದಾರೆ.

ಇಷ್ಟು ದಿನಗಳ ಕಾಲ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದ್ದ ರಾಜೇಶ್ ಧ್ರುವ ಇದೀಗ ಮೊದಲ ಬಾರಿಗೆ ಹಿರಿತೆರೆಗೆ ಪ್ರವೇಶ ಮಾಡಿದ್ದಾರೆ. ಅದು ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಹೌದು.

‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ (Since 1979)’ ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿರುವ ರಾಜೇಶ್ ಧ್ರುವ ಈ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ನಟನಾಗಿಯೂ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ಸಿನಿಮಾದ ಪೋಸ್ಟರ್ ನಲ್ಲಿ 70 ರ ದಶಕದ ಸಾಂಪ್ರದಾಯಿಕ ಫೋಟೋ ಸ್ಟುಡಿಯೋದ ಸಾರವಿದ್ದು, ಹಿನ್ನೆಲೆಯಲ್ಲಿ ವರನಟ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್ ಕುಮಾರ್ ಜೊತೆಗೆ ಒಂದಷ್ಟು ಜನ ಕನ್ನಡದ ಸೆಲೆಬ್ರಿಟಿಗಳ ಸ್ಟಾಕ್ ಚಿತ್ರಗಳನ್ನು ಹೊಂದಿದೆ.

“ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾದಲ್ಲಿ ಫೋಟೋಗ್ರಾಫರ್ ಒಬ್ಬರ ಜೀವನ ಮತ್ತು ಸ್ಟುಡಿಯೋ ಜೊತೆಗಿನ ಆತನ ಭಾವನಾತ್ಮಕ ಸಂಬಂಧ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಇನ್ನು ಸಿನಿಮಾದಲ್ಲಿ ಬರುವ ನಿರ್ದಿಷ್ಟ ಸನ್ನಿವೇಶವೊಂದರಿಂದ ಆತನ ಜೀವನದಲ್ಲಿ ಯಾವ ರೀತಿಯಲ್ಲಿ ತಿರುವು ಪಡೆಯುತ್ತದೆ ಎಂಬುದೇ ಈ ಸಿನಿಮಾದ ಕಥಾ ಹಂದರ” ಎನ್ನುತ್ತಾರೆ ರಾಜೇಶ್ ಧ್ರುವ.

“ನಿರ್ದೇಶನ ನನಗೆ ಹೊಸತೇನಲ್ಲ. ಈಗಾಗಲೇ ನಾನು ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಅಲ್ಲಿಂದಲೇ ನಿರ್ದೇಶನದ ಕುರಿತಾದ ಎಲ್ಲಾ ವಿಷಯಗಳನ್ನು ಕಲಿಯುತ್ತಲೇ ಸಾಗಿದೆ. ಕ್ಯಾಮೆರಾದ ಹಿಂದಿನ ಎಲ್ಲಾ ಕೆಲಸಗಳನ್ನು ಹಂತಹಂತವಾಗಿ ಕಲಿತೆ. ಇದರಿಂದಾಗಿ ನನಗೆ ಮೊದಲ ಸಿನಿಮಾವನ್ನು ನಿರ್ದೇಶಿಸಲು ಸಾಧ್ಯವಾಯಿತು” ಎನ್ನುತ್ತಾರೆ ರಾಜೇಶ್ ಧ್ರುವ..

ಕೊನೆಯದಾಗಿ “ಇದು ಪ್ರತಿಯೊಬ್ಬರ ಮೊದಲ ಪ್ರಯತ್ನ ಹೌದು. ಸಿನಿಮಾ ಅಂಥ ಬಂದಾಗ ಎಲ್ಲಾ ಕಲಾವಿದರುಗಳ ಜೊತೆಗೆ ತಂತ್ರಜ್ಞರುಗಳಿಗೆ ಸಿನಿಮಾ ರಂಗ ಹೊಸದು. ಒಟ್ಟಿನಲ್ಲಿ ಒಂದು ರೀತಿಯ ವಿನೂತನ ಪ್ರಯತ್ನದೊಂದಿಗೆ ಎಲ್ಲರೂ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ತಯಾರಾಗಿದ್ದಾರೆ” ಎಂದು ಸಂತಸದಿಂದ ಹೇಳುತ್ತಾರೆ ರಾಜೇಶ್ ಧ್ರುವ.

ವೆಂಕಟೇಶ್ವರ್ ರಾವ್ ನಿರ್ಮಿಸಿರುವ ಈ ಸಿನಿಮಾಕ್ಕೆ ಅಭಿಷೇಕ್ ಸಿರ್ಸಿ ಮತ್ತು ಪೃಥ್ವಿಕಾಂತ್ ಅವರು ಚಿತ್ರಕಥೆ ಬರೆದಿದ್ದಾರೆ.
ಮನೋಜ್ ಸಿನಿಸ್ಟುಡಿಯೋ ಅವರು ಛಾಯಾಗ್ರಹಣ ಮಾಡಿದ್ದರೆ, ಶ್ರೀರಾಮ್ ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಸ್ವಸ್ತಿಕ್ ಕರೆಕಾಡ್ ಹಿನ್ನಲೆ ಸಂಗೀತ, ಗಣಪತಿ ಭಟ್ ಸಂಕಲನವಿದೆ.

ಇದರ ಹೊರತಾಗಿ ತಾರಾಗಣದಲ್ಲಿ ಕನ್ಯಾಕುಮಾರಿಯ ಧ್ರುವ ಖ್ಯಾತಿಯ ನಕುಲ್, ಮಜಾಭಾರತ ಖ್ಯಾತಿಯ ಶುಭಲಕ್ಷ್ಮಿ, ರವಿ ಸಾಲಿಯಾನ್, ಸಂಪತ್ ಜೈ ರಾಮ್, ರಕ್ಷಿತ್ ಮತ್ತು ರವಿ ಮೂರೂರ್ ಕಾಣಿಸಿಕೊಂಡಿದ್ದಾರೆ. ಹಾಗೆ, ವಿಶೇಷ ಪಾತ್ರದಲ್ಲಿ ಕಿರುತೆರೆಯ ನಟ ಶಿಶಿರ್ ಶಾಸ್ತ್ರೀ ರವರು ಕೂಡ ಕಾಣಿಸಲಿದ್ದಾರೆ

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ