ನಟ-ನಿರ್ಮಾಪಕ ಡಾಲಿ ಧನಂಜಯ ಅವರು ಸದ್ಯ ತಮ್ಮ ಸಿನಿಮಾಗಳಲ್ಲಿ ಬ್ಯುಸಿ. ಇದರ ನಡುವೆ ತಮ್ಮ ನಟನೆಯಿಲ್ಲದ ಒಂದಷ್ಟು ಸಿನೆಮಾಗಳನ್ನು ಅವರು ನಿರ್ಮಿಸಲಿದ್ದಾರೆ. ಅವರೇ ಹೇಳಿರುವಂತೆ, ಅವರ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ವರ್ಷಕ್ಕೆ ಎರಡು ಚಿತ್ರಗಳಂತು ಬರಲಿದ್ದು, ಅದರಲ್ಲಿ ಒಂದು ಸಿನಿಮಾ ಸಂಪೂರ್ಣ ಹೊಸಬರಿಗೆ ಒಪ್ಪಿಸಲಾಗುತ್ತದೆ.

ಅದೇ ರೀತಿಯಲ್ಲಿ ‘ಡಾಲಿ ಪಿಕ್ಚರ್ಸ್’ ನಿರ್ಮಾಣದಲ್ಲಿ ಬರುತ್ತಿರುವ ಹೊಸಬರ ಚಿತ್ರ ‘ಟಗರು ಪಾಳ್ಯ’. ಸದ್ಯ ಈ ಸಿನಿಮಾದ ನಾಯಕನಟ ಯಾರೆಂದು ಚಿತ್ರತಂಡ ಘೋಷಿಸಿದ್ದು, ‘ಇಕ್ಕಟ್’ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದ ನಾಗಭೂಷಣ ಅವರೇ ಈ ಚಿತ್ರದ ನಾಯಕನಟರಾಗಿರಲಿದ್ದಾರೆ.

ಉಮೇಶ್ ಕೆ ಕೃಪಾ ಎಂಬ ಯುವನಿರ್ದೇಶಕರು ‘ಟಗರು ಪಾಳ್ಯ’ ಸಿನಿಮಾದ ನಿರ್ದೇಶಕರಾಗಿರಲಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಅವರಿಗೆ ಸಹಾಯಕ ನಿರ್ದೇಶಕರಿಗೆ ಕೆಲಸ ಮಾಡಿದ್ದರು ಇವರು. ‘ಇಕ್ಕಟ್’ ಸಿನಿಮಾದ ಮೂಲಕ ನಾಯಕರಾಗಿ ಹೊರಹೊಮ್ಮಿದ ನಾಗಭೂಷಣ ಕನ್ನಡದ ಹಲವು ಸಿನಿಮಾಗಳಲ್ಲಿ ಹಾಸ್ಯನಟನಾಗಿ ನಟಿಸಿ ಜನರನ್ನ ಮೆಚ್ಚಿಸಿದ್ದರು.

‘ಬಡವ ರಾಸ್ಕಲ್’ ಸಿನಿಮಾದಲ್ಲಿನ ಅವರ ಅಭಿನಯ ಎಲ್ಲೆಡೆ ಪ್ರಶಂಸೆಗೆ ಒಳಗಾಗಿತ್ತು. ‘ಟಗರು ಪಾಳ್ಯ’ ‘ಇಕ್ಕಟ್’ ಚಿತ್ರಕ್ಕಿಂತ ಬಹಳ ಭಿನ್ನವಾಗಿರಲಿದೆ. ‘ಇಕ್ಕಟ್’ ಕೋರೋನ ಕಾಲದಲ್ಲಿ ಬೆಂಗಳೂರಿನಂತಹ ನಗರದಲ್ಲಿ ನಡೆವಂತ ಕಥೆಯಗಿತ್ತು, ಆದರೆ ‘ಟಗರು ಪಾಳ್ಯ’ ಪಕ್ಕ ಗ್ರಾಮೀಣ ಕಥೆಯಾಗಿರಲಿದೆ.

ಈ ಬಗ್ಗೆ ಸಂತಸದಿಂದ ಹೇಳಿಕೊಳ್ಳುವ ನಾಗಭೂಷಣ ಅವರು, “ಇದು ಗ್ರಾಮೀಣ ಸೊಗಡಿನ ಕಥೆ. ಹಳ್ಳಿಗಳಲ್ಲಿ ಜನರು ದೇವಸ್ಥಾನಕ್ಕೆ ಹೋಗಿ, ಅಲ್ಲಿ ಅಡುಗೆ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸಿ, ತಾವೂ ಒಂದೊಳ್ಳೆ ಭೋಜನ ಮಾಡುತ್ತಾರೆ. ಇದು ಒಂದೆಡೆ ಭಕ್ತಿಯಾದರೆ, ಇನ್ನೊಂದೆಡೆ ಹೆಚ್ಚೇನು ಹೊರಗಡೆ ಹೋಗದ ಊರಿನವರಿಗೆ ಒಂದೊಳ್ಳೆ ತಿರುಗಾಟ ಕೂಡ. ‘ಟಗರು ಪಾಳ್ಯ’ ಇಂತದ್ದೇ ಒಂದು ಸನ್ನಿವೇಶದ ಸುತ್ತ ಹೆಣೆದ ಕಥೆ” ಎಂದು ಹೇಳಿದರು.

“ಮೊದಲು ಉಮೇಶ್ ಅವರು ಡಾಲಿಗೆ ಕಥೆ ಹೇಳಿದರು, ಅವರು ಒಪ್ಪಿಕೊಂಡು ನಿರ್ಮಿಸಲು ಮುಂದಾದಾಗ, ನನಗೆ ನಾಯಕರಾಗಿ ನಟಿಸಲು ಕೇಳಿದರು, ಕಥೆಯನ್ನ ಇಷ್ಟ ಪಟ್ಟಿದ್ದ ನಾನು, ಒಪ್ಪಿಕೊಂಡೇ. ಮೂಲತಃ ಹಳ್ಳಿಯವನೇ ಆಗಿರುವ ನನಗೆ ಈ ಪಾತ್ರಕ್ಕೆ ಸಿದ್ದವಾಗಲು ವಿಶೇಷ ಪ್ರಯತ್ನ ಬೇಕಿಲ್ಲ. ಬಾಲ್ಯದ ದಿನಗಳ ಮೆಲುಕು ಸಾಕು ” ಎನ್ನುತ್ತಾರೆ. ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ರಂಗಾಯಣ ರಘು ಹಾಗು ತಾರ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿಯಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ