ದೇಶದೆಲ್ಲೆಡೆ ಬಹಳ ಮೆಚ್ಚುಗೆ ಪಡೆದು ಸುದ್ದಿಯಲ್ಲಿರುವ ‘ಕಾಂತಾರ’ ಚಿತ್ರದ ಬಗ್ಗೆ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಒಂದಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರವುದು ನಮಗೆಲ್ಲಾ ಗೊತ್ತೇ ಇದೆ. ನಟ, ನಿರ್ದೇಶಕ ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ಸಿನಿಮಾ ಕಾಂತಾರ ಇನ್ನೂ ಥಿಯೇಟರ್ ಗಳಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವಾಗಲೇ ಚೇತನ ಅವರು ‘ಹಿಂದುತ್ವ, ಭೂತ ಕೋಲ ಹಿಂದೂ ಸಂಸ್ಕೃತಿ ಅಲ್ಲ’ ಎಂಬಿತ್ಯಾದಿ ಹೇಳಿಕೆ ನೀಡಿ ಚರ್ಚೆಯಲ್ಲಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆಯತ್ತಲೇ ಇದೆ. ಹೀಗಿರುವಾಗ ನಟ ಕಿಶೋರ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ. ಕಾಂತಾರ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಕಿಶೋರ್ ಕುಮಾರ್ ಜಿ ನಟ ಚೇತನ್ ರ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿದ್ದು..

“ನಮ್ಮ ಜಾನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ವಿನಂತಿ, ಈ ಆಚರಣೆಗಳ ಬಗ್ಗೆ ಸರಿಯಾಗಿ ತಿಳಿದಿಲ್ಲವಾದರೆ ಏನೇನೂ ಮಾತನಾಡಲು ಹೋಗಬೇಡಿ. ಕಾಂತಾರ ಜಾತಿ ಧರ್ಮಗಳನ್ನು ಮೀರಿದ್ದೇನನ್ನೋ ಹೇಳುತ್ತಿರುವಾಗ ಜಾತಿಯ ಲೇಪ ಮೆತ್ತಿ ಅದನ್ನು ಕೆಡಿಸಬೇಡಿ. ಜನರಿಗಾಗಿ ಬಾಂಬು ಸಿಡಿಸಿ ಜೀವತೆಗೆವ ಗರ್ನಾಲು ಸಾಹೇಬನ ಅಧರ್ಮ ಕಾಣುತ್ತಿಲ್ಲವೇಕೆ??” ಎನ್ನುತ್ತಾರೆ ಕಿಶೋರ್.

ಇದರ ಜೊತೆಗೆ “ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಕೇವಲ ಓಟಿಗಾಗಿ ಪಟೇಲ್, ಗಾಂಧಿ, ಬೋಸ್, ನೆಹರೂ ಸಹಿತ ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬಳಸಿ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ, ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿ ದ್ವೇಷವನ್ನು ಪಸರಿಸುವ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ. ಸಿನಿಮಾಗಳು ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸಬೇಕು. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಕೀಳು ಮಟ್ಟಕ್ಕೆ ಇಳಿದು ಬಿಟ್ಟರೆ ಕಾಂತಾರಕ್ಕೆ ಸಿಗುತ್ತಿರುವ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು!” ಎಂದು ಕಿಶೋರ್ ತಮ್ಮ ಪೇಸ್ ಬುಕ್ ಫೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ