ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಡಾಕ್ಟರ್ ಅಜಯ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ದೀಪಕ್ ಮಹಾದೇವ್. ನಾಯಕ್ ಕುಟುಂಬದ ಹಿರಿಸೊಸೆ ಚಂದ್ರಲೇಖಾ ಮಗಳು ಸಾಹಿತ್ಯಳ ಗಂಡ ಆಗಿ ನಟಿಸುತ್ತಿರುವ ದೀಪಕ್ ಮಹಾದೇವ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ.

ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ದೀಪಕ್ ಮಹಾದೇವ್ ಅವರು ನಟರಾಗಬೇಕು ಎಂದು ಕನಸು ಕಂಡವರಲ್ಲ. ಬದಲಿಗೆ ಆಚಾನಕ್ ಆಗಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟಿರುವ ದೀಪಕ್ ಇಂದು ತಮ್ಮ ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಿರುವ ಪ್ರತಿಭಾವಂತ ನಟ ಹೌದು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ನಾ ನಿನ್ನ ಬಿಡಲಾರೆ ಯಲ್ಲಿ ನಾಯಕ ಅಕ್ಷಯ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು ದೀಪಕ್ ಮಹಾದೇವ್. ನಾ ನಿನ್ನ ಬಿಡಲಾರೆ ಧಾರಾವಾಹಿಯ ನಿರ್ದೇಶಕರಾಗಿರುವ ವಿನೋದ್ ದೊಂಡಾಳೆ ಅವರ ಫೇಸ್ ಬುಕ್ ಪ್ರೆಂಡ್ ಲಿಸ್ಟ್ ನಲ್ಲಿ ದೀಪಕ್ ಮಹಾದೇವ್ ಅವರ ಅತ್ತಿಗೆ ಇದ್ದರು. ದೀಪಕ್ ಅವರ ಅತ್ತಿಗೆ ಪೋಸ್ಟ್ ಮಾಡಿದ ಫ್ಯಾಮಿಲಿ ಫೋಟೋ ನೋಡಿದ ವಿನೋದ್ ದೊಂಡಾಳೆ ಅಭಿನಯಿಸುವ ಅವಕಾಶ ನೀಡಿದರು.

ಮನೆಯವರೆಲ್ಲರೂ ಓಕೆ ಎಂದ ಹೇಳಿದ ಮೇಲಷ್ಟೇ ನಟನೆಯತ್ತ ಮುಖ ಮಾಡಿದ ಚಾಕಲೇಟ್ ಹುಡುಗ ಆ ಕಾರಣಕ್ಕಾಗಿ ಐಬಿಎಂ ನ ಕೆಲಸಕ್ಕೂ ವಿದಾಯ ಹೇಳಿದ್ದರು. ನಾ ನಿನ್ನ ಬಿಡಲಾರೆ ಧಾರಾವಾಹಿಯ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಮೋಡಿ ಮಾಡಿದರು.

ನಾಯಕಿ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ದೀಪಕ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿನ್ನಿಂದಲೇ ಧಾರಾವಾಹಿಯ ವರುಣ್ ಆಗಿ ಕಂ ಬ್ಯಾಕ್ ಆಗಿದ್ದರು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಅಜಯ್ ಆಗಿ ಅಭಿನಯಿಸುತ್ತಿರುವ ದೀಪಕ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ಅಭಯ್ ಆಗಿ ನಟಿಸುತ್ತಿದ್ದಾರೆ. ಇನ್ನು ಒಂದಾದ ಮೇಲೆ ಒಂದರಂತೆ ಕಿರುತೆರೆಯಲ್ಲಿ ‘ಸುವರ್ಣ’ಅವಕಾಶ ಪಡೆದುಕೊಳ್ಳುತ್ತಿರುವ ದೀಪಕ್ ಮಹಾದೇವ ಅವರು ಮುಂದಿನ ದಿನಗಳಲ್ಲಿ ಹಿರಿತೆರೆಗೆ ಕಾಲಿಡುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ