ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿ ನಾಯಕಿ ರಾಗಾಳನ್ನು ಮದುವೆಯಾಗುವ ಹುಡುಗ ವಿಶ್ವಾಸ್ ಆಗಿ ನಟಿಸುತ್ತಿರುವ ಅನಿರುದ್ಧ್ ವೇದಾಂತಿ ಅವರಿಗೆ ಬಾಲ್ಯದಿಂದಲೂ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ಬಯಕೆ. ನೂರೊಂದು ಸುಳ್ಳು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಅನಿರುದ್ಧ್ ವೇದಾಂತಿ ಬಣ್ಣದ ಬದುಕಿಗೆ ಮುನ್ನುಡಿ ಬರೆದುದು ರಂಗಭೂಮಿ.

ನೂರೊಂದು ಸುಳ್ಳು ಧಾರಾವಾಹಿಯ ನಂತರ ವಿನು ಬಳಂಜ ನಿರ್ದೇಶನದ ನಿನ್ನೊಲುನೆಯಿಂದಲೇ ಧಾರಾವಾಹಿಯಲ್ಲಿ ಹಿರಿಮಗನ ಪಾತ್ರಕ್ಕೆ ಜೀವ ತುಂಬಿದ್ದರು. ನಂತರ ಪ್ರೀತಂ ಶೆಟ್ಟಿ ನಿರ್ದೇಶನದ ಮೀರಾ ಮಾಧವ ಧಾರಾವಾಹಿಯಲ್ಲಿ ಎರಡನೇ ಪ್ರಮುಖ ಪಾತ್ರ ಪ್ರಶಾಂತ್ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿರುವ ಅನಿರುದ್ಧ್ ವೇದಾಂತಿ ಅವರು ಯಶೋಧೆ, ಅಮ್ಮ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೃಹಲಕ್ಷ್ಮಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಅನಿರುದ್ಧ್ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು.
ಮುಂದೆ ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಖಳನಾಯಕ ಆಗಿ ನಟಿಸಿದ್ದ ಅನಿರುದ್ಧ್ ಬಯಸದೇ ಬಳಿ ಬಂದೆ ಧಾರಾವಾಹಿಯಲ್ಲಿಯೂ ಖಳನಾಯಕ ಆಗಿ ಕಮಾಲ್ ಮಾಡಿದ್ದಾರೆ. ತದ ನಂತರ ಲಕ್ಷಣ ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದ ಅನಿರುದ್ಧ್ ಅವರಿಗೆ ವಿಲನ್ ಆಗಿ ಅಬ್ಬರಿಸುವುದೇ ಹೆಚ್ಚು ಖುಷಿಯಂತೆ. “ನನಗೆ ನಾಯಕ ಅದರಲ್ಲೂ ಲವರ್ ಬಾಯ್ ಆಗಿ ನಟಿಸುವುದಕ್ಕಿಂತ ಖಳನಾಯಕ ಆಗಿ ಅಬ್ಬರಿಸುವುದೇ ಹೆಚ್ಚು ಖುಷಿ ನೀಡುತ್ತದೆ. ಜೊತೆಗೆ ನೆಗೆಟಿವ್ ಪಾತ್ರದಲ್ಲಿ ಅಭಿನಯಕ್ಕೆ ಅವಕಾಶವೂ ಕೂಡಾ ಜಾಸ್ತಿ. ಇನ್ನು ಖಳನಾಯಕ ಎನ್ನುವ ಟೈಟಲ್ ಕೂಡಾ ದೊರೆಯುತ್ತದೆ” ಎಂದು ಹೇಳುತ್ತಾರೆ ಅನಿರುದ್ಧ್ ವೇದಾಂತಿ.

ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಅನಿರುದ್ಧ್ ವೇದಾಂತಿ ಅಭಿನಯಿಸಿದ ನಾಟಕಗಳಿಗೆ ಲೆಕ್ಕವಿಲ್ಲ. ಜಿ.ಬಿ.ಕೋಟೆಯವರ ಚಿಲಿಪಿಲಿ ತಂಡಕ್ಕೆ ಸೇರಿದ ಇವರು ಆರಂಭದಲ್ಲಿ ಫ್ಯಾಂಟಸಿ ಪಾತ್ರಗಳಲ್ಲಷ್ಟೇ ನಟಿಸುತ್ತಿದ್ದರು. ಯಾವುದೇ ಪಾತ್ರ ನೀಡಿದರೂ ನಿರಾಂತಕವಾಗಿ ಮಾಡುವಷ್ಟು ರಂಗಭೂಮಿಯಲ್ಲಿ ಪಳಗಿರುವ ಇವರು ಇದ್ದಂತೆ ಇರುವುದು ಲೇಸು ನಾಟಕದ ಗಾಳಿರಾಯನ ಪಾತ್ರ, ತುಕ್ಕೋಜಿ ಬುಕೋಜಿ ನಾಟಕದಲ್ಲಿ ಕಟ್ಟೆ ಭೂತು ಪಾತ್ರಗಳಲ್ಲಿ ಬಣ್ಣ ಹಚ್ಚಿದರು.

ರಂಗಸೌರಭ ಮತ್ತು ನವೋದಯ ಎಂಬ ನಾಟಕ ತಂಡಗಳಲ್ಲಿ ಗುರುತಿಸಿಕೊಂಡಿರುವ ಅನಿರುದ್ಧ್ ವೇದಾಂತಿ ಹಲಗಲಿ ಬೇಡರ ದಂಗೆ, ಊರು ಭಂಗ, ಮೈಸೂರು ಮಲ್ಲಿಗೆ, ಗಂಗಾವತರಣ, ಶಸ್ತ್ರ ಪರ್ವ, ಅನ್ನಾವತಾರ,ರೋಮಿಯೋ ಲವ್ಸ್ ಅನಾರ್ಕಲಿ, ಸಿಂಹಾಸಚಲನಂ ಸಂಪಿಗೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ.

ಕೊನೆ ಪುಟ ಮತ್ತು ಸತ್ವ ಎಂಬ ಕಿರುಚಿತ್ರಗಳಲ್ಲಿಯೂ ನಟಿಸಿರುವ ಇವರು ಜಿಂದಾ ಮತ್ತು ಟೋರಾ ಟೋರಾ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಇವರ ಅಭಿನಯದ ಹಾಸ್ಟೆಲ್ ಹುಡುಗರು ಹಾಗೂ ಒಂಭತ್ತು ಸುಳ್ಳು ಕಥೆಗಳು ಸಿನಿಮಾ ಬಿಡುಗಡೆಯಾಗಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ