ಸ್ಯಾಂಡಲ್ ವುಡ್ ನಲ್ಲಿ ‘ಕೃಷ್ಣ’ ಎಂದೇ ಪ್ರಖ್ಯಾತರಾಗಿರುವ ಹೆಸರಾಂತ ನಟ ಅಜಯ್ ರಾವ್ ಸದ್ಯ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಭರದಿಂದ ಸಾಗುತ್ತಿರುವ ನಿರ್ದೇಶಕ ಮಂಜು ಸ್ವರಾಜ್ ಅವರೊಂದಿಗಿನ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದ ಸಲುವಾಗಿ ಮೈಸೂರಿನಲ್ಲಿರುವ ಅಜಯ್ ರಾವ್ ಅವರ ಹೊಸ ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಹೆಸರಿಡಲಾಗಿದೆ. ಇದೊಂದು ನ್ಯಾಯಾಂಗಕ್ಕೆ ಸಂಬಂದಿಸಿದ ಸಿನಿಮಾವಾಗಿದ್ದು, ಚಿತ್ರದಲ್ಲಿ ಅಜಯ್ ರಾವ್ ಅವರು ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಕಟಿಂಗ್ ಶಾಪ್’ ಸಿನಿಮಾ ಖ್ಯಾತಿಯ ಪವನ್ ಭಟ್ ಅವರು ಚಿತ್ರದ ನಿರ್ದೇಶನ ಮಾಡುತ್ತಿದ್ದು, ಈ ಬಗ್ಗೆ ಮಾತನಾಡುವ ಅವರು, “ಈ ಸಿನಿಮಾ ಯಾವ ಬಗೆಯಲ್ಲಿಯೂ ರವಿಚಂದ್ರನ್ ಅವರ ‘ಯುದ್ಧಕಾಂಡ’ ಚಿತ್ರಕ್ಕೆ ಸಂಬಂಧಿಸಿಲ್ಲ. ಕಥೆಗೆ ತುಂಬಾ ಹತ್ತಿರವಾಗಿದೆ ಎಂಬ ಭಾವದಿಂದ ಈ ಹೆಸರನ್ನ ಇಡಲಾಗಿದೆ” ಎಂದಿದ್ದಾರೆ.

ಇದರ ಜೊತೆಗೆ “ಅಜಯ್ ರಾವ್ ವರು ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರದ್ದು ಒಂದೊಳ್ಳೆ ಪಾತ್ರ. ಒಂದು ಸೂಕ್ಷ್ಮ ವಿಚಾರದ ಪರವಾಗಿ ಹೋರಾಡುವ ಲಾಯರ್ ಆಗಿ ಅಜಯ್ ಅವರು ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಒಂದು ಅರ್ಥಗರ್ಭಿತ ಕಥೆಯುಳ್ಳ ಕಮರ್ಷಿಯಲ್ ಕೋರ್ಟ್ ರೂಮ್ ಡ್ರಾಮಾ ಆಗಿ ಹೊರಹೊಮ್ಮಲಿದೆ. ಸಿನಿಮಾದಲ್ಲಿ ಇನ್ನು ಹಲವು ಸ್ಟಾರ್ ನಟರು ನಟಿಸಲಿದ್ದು, ನಿಧಾನವಾಗಿ ಎಲ್ಲವನ್ನು ಘೋಷಿಸಲಿದ್ದೇವೆ” ಎಂದಿದ್ದಾರೆ.

ಚಿತ್ರಕ್ಕೆ ಸ್ವತಃ ಅಜಯ್ ರಾವ್ ಅವರೇ ಬಂಡವಾಳ ಹೂಡುತ್ತಿದ್ದು, ಕೆ ಬಿ ಪ್ರವೀಣ್ ಅವರ ಸಂಗೀತ ಹಾಗು ಕಾರ್ತಿಕ್ ಶರ್ಮ ಅವರ ಛಾಯಾಗ್ರಾಹಣ ಚಿತ್ರಕ್ಕಿರಲಿದೆ. 2023ರ ಮಾರ್ಚ್ ಅಷ್ಟರಲ್ಲಿ ಚಿತ್ರ ತೆರೆಮೇಲೆ ಬರುವ ಸಾಧ್ಯತೆಗಳಿವೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ