ಫ್ಯಾಮಿಲಿ ಮ್ಯಾನ್ ಅಭಿಜಿತ್ “ಆಟ್ಲಿ” ಚಿತ್ರದ ಮೂಲಕ ಮತ್ತೆ ನಟನೆಯ ಕಡೆಗೆ ಮರಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ದಶಕಗಳ ಹಿಂದೆ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ಸಹನಟನಾಗಿ ಕನ್ನಡ ಸಿನಿಪ್ರಿಯರನ್ನು ರಂಜಿಸಿದ ನಟ ಅಭಿಜಿತ್ ನಟನೆಗೆ ವಾಪಾಸಾಗುತ್ತಿದ್ದಾರೆ.

“ಅಟ್ಲಿ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ನನಗೆ ಖುಷಿ ಇದೆ . ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ತೊಂಭತ್ತರ ದಶಕದಲ್ಲಿ ನನ್ನ ಹಾಗೂ ನಟಿ ಶೃತಿ ಅವರ ಜೋಡಿಯಲ್ಲಿ ಬಿಡುಗಡೆಯಾಗಿದ್ದ ಹಲವು ಚಿತ್ರಗಳನ್ನು ಪ್ರೇಕ್ಷಕರು ಬಹಳವಾಗಿ ಮೆಚ್ಚಿದ್ದರು. ಈಗ ಹಲವು ವರ್ಷಗಳ ನಂತರ ನಾನು ಶೃತಿ ಅವರ ಜೊತೆ ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ” ಎನ್ನುತ್ತಾರೆ ಹಿರಿಯ ನಟ ಅಭಿಜಿತ್.

ಆರ್ ಜಿ ವಿ ಟಾಕೀಸ್ ಲಾಂಛನದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ರಂಗನಾಥ್ ಆರ್ ನಿರ್ದೇಶಿಸುತ್ತಿರುವ ‘ಅಟ್ಲಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಉಳಿದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದರು.

ನಿರ್ದೇಶಕ ರಂಗನಾಥ ಚಿತ್ರಕಥೆ ಬರೆದಿದ್ದು, ಕಾಸರಗೋಡಿನ ಸುತ್ತಮುತ್ತಲು ಈ ಕಥೆ ನಡೆಯುತ್ತದೆ. ಈ ಚಿತ್ರದ ನಾಯಕಿಯಾಗಿ ಪೂಜಾ ಜನಾರ್ದನ್ ನಟಿಸುತ್ತಿದ್ದರೆ, ಕೆ.ಜಿ.ಎಫ್ ಖ್ಯಾತಿಯ ಅನ್ ಮೋಲ್, ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ, ಲಲಿತಾ ‘ಅಟ್ಲಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಮೂರು ಹಾಡುಗಳನ್ನು ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ