ಭಾರತ ಸಾರಥಿ: ಜನಪರ ಧ್ವನಿ – ಪ್ರತಿಭಟನೆಯ ಅಸ್ತ್ರ
ಹಾಸನ ಜಿಲ್ಲೆಯ, ಅರಸಿಕೆರೆ ತಾಲ್ಲೂಕಿನ ಗಂಡಸಿ ಗ್ರಾಮದ ಗಂಡಸಿ ಸದಾನಂದಸ್ವಾಮಿ ಆದ ನಾನು ಮಾಧ್ಯಮ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೇನೆ. ಭಾರತ ಸಾರಥಿ ಪತ್ರಿಕೆಯ ಸಂಸ್ಥಾಪಕ ಸಂಪಾದಕನಾಗಿ 12 ವರ್ಷಗಳ ಕಾಲ ಸಾಗಿ ಬಂದಿದ್ದು, ಇದೀಗ 13 ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಮೂಲತಃ ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅನ್ನು 23 ವರ್ಷಗಳ ಹಿಂದೆ ಸ್ಥಾಪಿಸಿದ ನಾನು, ಚಾಲಕರ ಬದುಕು ಬವಣೆಯ ನಾನಾ ಮಗ್ಗುಲುಗಳನ್ನು ಬಲ್ಲೆ. ಹೋರಾಟವೇ ನನ್ನ ಮೂಲ ಅಸ್ತ್ರ, ಅವಕಾಶವಂಚಿತ, ಸಂಕಷ್ಟದಲ್ಲಿರುವವರಿಗೆ ಧ್ವನಿಯಾಗಿ ಕೆಲಸ ಮಾಡುವುದು ನನ್ನ ವೃತ್ತಿ. ಪತ್ರಿಕೋದ್ಯಮ ನನ್ನ ಜೀವಾಳ.
ಕೃಷಿ ಭಾರತದ ಬೆನ್ನೆಲೆಬು. ಕೃಷಿ ನಂತರ 22 ಕೋಟಿಗೂ ಹೆಚ್ಚು ಉದ್ಯೋಗ ಒದಗಿಸಿರುವ ಕ್ಷೇತ್ರವೆಂದರೆ ಸರಕು ಸಾಗಾಣೆ ವಲಯ. ಈ ಕ್ಷೇತ್ರದಲ್ಲಿ ಚಾಲಕರ ಪಾತ್ರ ಅನನ್ಯ. ಕೋವಿಡ್ ಸಂಕ್ರಾಮಿಕ ಸಂದರ್ಭದಲ್ಲಿ ಜೀವ ಲೆಕ್ಕಿಸದೇ ಪ್ರತಿಯೊಂದು ವಸ್ತುವನ್ನು ಮನೆ ಮನೆಗೆ ತಲುಪಿಸಿದ ಸೇನಾನಿಗಳು ಕೂಡ ಚಾಲಕರೇ. ತೀವ್ರ ಸಂಕಷ್ಟಕ್ಕೆ ಒಳಗಾದವರೂ ಸಹ ಚಾಲಕರೇ. ಇದನ್ನು ಮನಗಂಡು ಚಾಲಕರಿಗೆ ಆರ್ಥಿಕ ನೆರವು ಒದಗಿಸಲು “ಸೆಲ್ಪಿ ವಿತ್ ಖಾಲಿ ತಪ್ಲೆ” ಎಂಬ ಚಳವಳಿ ಮೂಲಕ ರಾಜ್ಯ ಮತ್ತು ರಾಷ್ಟ್ರದ ಆಡಳಿತಗಾರರ ಕಣ್ಣು ತೆರೆಯುವಂತೆ ಹೋರಾಟ ನಡೆಸಿ ಪರಿಹಾರ ದೊರೆಯುವಂತೆ ಮಾಡಿದ್ದು ನನಗೆ ಸಮಾಧಾನ ತಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಚಾಲಕರು, ಸಂಕಷ್ಟದಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಅಭಿಯಾನ ಕೈಗೊಂಡು ಮಾನವೀಯ ನೆರವು ನೀಡಿದ್ದು ಸಾರ್ಥಕವೆನಿಸಿದೆ. ಹತ್ತು ವರ್ಷಗಳ ಕಾಲ ವೈಯಕ್ತಿವಾಗಿ ಚಾಲಕರ ದಿನಾಚರಣೆ ಆಚರಿಸಿದ ನಾನು ಸರ್ಕಾರದಿಂದಲೇ ಈ ಕಾರ್ಯಕ್ರಮ ಆಯೋಜಿಸುವಂತೆ ಸಾಕಷ್ಟು ರೀತಿಯಲ್ಲಿ ಹೋರಾಟ ಮಾಡಿದೆ. ಇದರ ಫಲವಾಗಿ ಮೊದಲ ಬಾರಿಗೆ 2019-20 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರ ಸ್ವಾಮಿ ಸರ್ಕಾರ ಬಜೆಟ್ ನಲ್ಲಿ ಚಾಲಕರ ದಿನ ಆಚರಿಸುವುದಾಗಿ ಘೋಷಣೆ ಮಾಡಿದ್ದು, ಇದು ನನ್ನ ಹೋರಾಟಕ್ಕೆ ದೊರೆತ ಜಯ.
ದೇಶದಲ್ಲಿ ಚಾಲಕರಿಗೆ ಧ್ವನಿಯಾಗುವ ಉದ್ದೇಶದ ಮೊದಲ ಪತ್ರಿಕೆ ಭಾರತ ಸಾರಥಿ. ಇದು ಚಾಲಕರು ಮತ್ತು ಧ್ವನಿ ಇಲ್ಲದವರ ಧ್ವನಿಯಷ್ಟೇ ಅಲ್ಲ, ಇದು ಪ್ರತಿಭಟನೆಯ ಅಸ್ತ್ರವೂ ಹೌದು. ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಜನರ ಧ್ವನಿಯಾಗಿ ಪತ್ರಿಕೆ ಮುನ್ನಡೆಯುತ್ತಿದೆ. ಚಾಲಕರ ಸಮಸ್ಯೆಗಳ ಮೊದಲ ಏಕೈಕ ಪತ್ರಿಕೆ ಭಾರತ ಸಾರಥಿ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ದಾಖಲಾಗಿರುವುದು ನನ್ನ ಹೆಮ್ಮೆಗೆ ಗರಿ ಮೂಡಿಸಿದೆ.
ಪತ್ರಿಕೋದ್ಯಮ ಇಂದು ಅಗಾಧವಾಗಿ ಬೆಳಯುತ್ತಿದ್ದು, ಇದರ ವೇಗಕ್ಕೆ ತಕ್ಕಂತೆ ಭಾರತ ಸಾರಥಿ ಕೂಡ ಅಭ್ಯುದಯ ಕಾಣುತ್ತಿದೆ. 2011 ರ ಅಕ್ಟೋಬರ್ 5 ರಂದು 84 ಪುಟದ ವರ್ಣರಂಜಿತ ಮಾಸ ಪತ್ರಿಕೆಯಾಗಿ ಆರಂಭವಾಗಿ ಐದು ವರ್ಷ ನಿರಂತರವಾಗಿ ವೈವಿಧ್ಯಮ ಸಂಚಿಕೆಗಳನ್ನು ಹೊರ ತಂದದ್ದು ವಿಶೇಷವೇ ಸರಿ. ನಂತರ 2016 ರ ನವೆಂಬರ್ ನಿಂದ ವಾರ ಪತ್ರಿಕೆಯಾಗಿ ಭಾರತ ಸಾರಥಿ ಹೊಸ ರೂಪ ಪಡೆಯಿತು. 2018 ರ ಜನವರಿ 1 ರಿಂದ ದಿನ ಪತ್ರಿಕೆಯಾಗಿ “ಭಾರತ ಸಾರಥಿ” ಪತ್ರಿಕೋದ್ಯಮದಲ್ಲಿ ಪರಿವರ್ತನೆಗೆ ಸಾಕ್ಷಿಯಾಯಿತು. ಅವಿರತ ಪರಿಶ್ರಮದಿಂದ 2016 ರಲ್ಲಿ “ಭಾರತ ಸಾರಥಿ” ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರ್ಪಡೆಯಾಗಿ, ಮಾನ್ಯತೆ ಪಡೆದ ಪತ್ರಿಕೆಯಾಗಿ ನಿಮ್ಮ ಮುಂದೆ ಬೆಳೆದು ನಿಂತಿದೆ. ಬದಲಾವಣೆ ಜಗದ ನಿಯಮ ಎಂಬಂತೆ ಇದೀಗ ಪರಿವರ್ತನೆಗೆ ತಕ್ಕಂತೆ ಭಾರತ ಸಾರಥಿ ಇ-ಪೇಪರ್, ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್ ಆಗಿ ಹುಟ್ಟು ಪಡೆದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಮುನ್ನಡೆಯುತ್ತಿದೆ.
ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಇದೀಗ ಅತಿ ದೊಡ್ಡ ಸವಾಲು. ಇದನ್ನು ಮೀರಿ ವೇಗವಾಗಿ ಮತ್ತು ವಸ್ತು ನಿಷ್ಠವಾಗಿ ಸುದ್ದಿ ಒದಗಿಸುವ ಕೆಲಸ ಮಾಡುತ್ತಿದೆ. ಪತ್ರಿಕೆಯನ್ನು ಮುನ್ನಡೆಸಲು ಚಾಲಕ ಸಮುದಾಯ, ಸಂಘ ಸಂಸ್ಥೆಗಳು, ಚಂದಾದಾರರು ನಮಗೆ ನಿರಂತರವಾಗಿ ನೆರವಾಗಿದ್ದಾರೆ. ಜಾಹೀರಾತು ನೀಡಿ ಬೆನ್ನೆಲುಬಾಗಿ ಪತ್ರಿಕೆಯನ್ನು ಮುನ್ನಡೆಸುತ್ತಿರುವ ಎಲ್ಲರನ್ನೂ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇನೆ. ಎಲ್ಲರಿಗೂ ಆಭಾರಿಯಾಗಿದ್ದೇನೆ.
ವಿಶ್ವಾಸಾರ್ಹತೆ ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಭಾರತ ಸಾರಥಿ ಪತ್ರಿಕೋದ್ಯಮದ ಮೌಲ್ಯಗಳನ್ನು ಉಳಿಸಿಕೊಂಡು ಸಾಗುತ್ತಿದೆ. ಚಾಲಕ ಸಮೂಹವಷ್ಟೇ ಅಲ್ಲದೇ ಎಲ್ಲಾ ವರ್ಗದ ಜನರಿಗೆ ಧ್ವನಿಯಾಗಿ, ಸಮಾಜದ ಕನ್ನಡಿಯಾಗಿದೆ. ಅಸಂಖ್ಯಾತ ಜನ ಸಮೂಹ ಪತ್ರಿಕೆಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಬೆಳೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಂತ್ರಿಗಳು, ಮನೋರಂಜನೆ, ಶಿಕ್ಷಣ, ಧಾರ್ಮಿಕ ಕ್ಷೇತ್ರದ ಗಣ್ಯರು, ಸಂಘಟನಾ ಕ್ಷೇತ್ರದ ಅನೇಕ ಹೋರಾಟಗಾರರ ಬೆಂಬಲ, ಹಾರೈಕೆ ಸದಾಶಯದೊಂದಿಗೆ ಪತ್ರಿಕೆ ನಿರಂತರವಾಗಿ ಮೂಡಿ ಬರುತ್ತಿದೆ.
ನಮ್ಮ ಮುಂದೆ ಇದೀಗ ಅನೇಕ ಸವಾಲುಗಳಿವೆ. ಇವೆಲ್ಲವುಗಳನ್ನು ದಾಟಿ ಮುನ್ನಡೆಯುವುದು ನಮ್ಮ ಕರ್ತವ್ಯವೂ ಆಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸುದ್ದಿಯನ್ನು ಸುದ್ದಿಯ ರೂಪದಲ್ಲಿ ಕೊಡುವುದು ಅತ್ಯಂತ ಮುಖ್ಯವಾಗಿದೆ. ಪತ್ರಿಕೋದ್ಯಮದ ಘನತೆ, ಗೌರವ, ಸಂಪ್ರದಾಯಗಳನ್ನು ಉಳಿಸಿಕೊಂಡು ನಡೆಯಬೇಕಾಗಿದೆ. ಎಲ್ಲಾ ಸಾವಲು, ಅಡೆತಡೆಗಳ ನಡುವೆ ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಾಣಿಜ್ಯ, ಶಿಕ್ಷಣ, ಜನಪರ ಸಮಸ್ಯೆಗಳು, ಮನೋರಂಜನೆ ಮತ್ತು ಕ್ರೀಡಾ ವಲಯಗಳಲ್ಲಿ ಜಗತ್ತಿನಾದ್ಯಂತ ನಡೆಯುವ ಎಲ್ಲಾ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಪತ್ರಿಕೆಯ ಮೂಲಕ ಕಟ್ಟಿಕೊಡುತ್ತಿದ್ದೇವೆ. ನಾವು ಸಾಗಬೇಕಾಗಿರುವ ಹಾದಿ ಇನ್ನೂ ಇದೆ. ಪತ್ರಿಕೋದ್ಯಮದಲ್ಲಿ ಭಾರತ ಸಾರಥಿ ಇನ್ನಷ್ಟು ಹೆಗ್ಗುರುತುಗಳನ್ನು ಮೂಡಿಸಬೇಕಾಗಿದೆ. ನಮ್ಮ ಈ ಪಯಣದಲ್ಲಿ ನಿಮ್ಮ ಸಹಕಾರ, ಬೆಂಬಲ ನಿರಂತರವಾಗಿ ಹೀಗೆಯೇ ಇರಲಿ ಎಂದು ಆಶಿಸುತ್ತಿದ್ದೇನೆ.
ಇಂತಿ ಎಂದೆಂದಿಗೂ ನಿಮ್ಮವ
ಗಂಡಸಿ ಸದಾನಂದ ಸ್ವಾಮಿ
ಸಂಪಾದಕರು
